Engineers are persons who discover world by their pen and brainಈಗಷ್ಟೇ ಪಿ.ಯು.ಸಿ .ಮುಗಿಸಿ ಡಿಗ್ರಿ, ಅನ್ನೋ ಹೊಸ ಲೋಕಕ್ಕೆ ಕಾಲಿಡುವ ಮೊದಲು ಏನಾದರೂ ಸಾಧಿಸಬೇಕು, ಯಾವ ಕ್ಷೇತ್ರದಲ್ಲಿ ನಾವು ತೊಡಗಿಕೊಂಡರೆ ಒಳ್ಳೆಯದು ಎಂದು ಸಾವಿರ ಪ್ರಶ್ನೆಗಳನ್ನು ಹೊತ್ತು ಈಗಷ್ಟೇ ಡಿಗ್ರಿ ಮೆಟ್ಟಿಲನ್ನು ಏರಿರುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಹಾಗೂ ಇಂಜಿನಿಯರಿಂಗ್ ಎನ್ನುವ ಪದವಿಯನ್ನು ಮುಗಿಸಿ ತಮ್ಮ ತಮ್ಮ ಕನಸಿನ ಬೆನ್ನೇರಿ ಯಶಸ್ಸನ್ನು ಗಳಿಸಿರುವ ಹಾಗೂ ಗಳಿಸುತ್ತಿರುವ ಎಲ್ಲಾ ಇಂಜಿನಿಯರ್ ಗಳಿಗೂ ಇಂಜಿನಿಯರ್ ದಿನದ ಶುಭಾಶಯ .
ಎಂಜಿನಿಯರ್ ಎನ್ನುವ ಬಿರುದು ಕೆಲವರಿಗೆ ಹೆಮ್ಮೆಯನ್ನು ತಂದುಕೊಡುವಂತಹದ್ದು ಏಕೆ ಗೊತ್ತಾ? ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15ರಂದು ಜನಿಸಿದರು .”ನ ಭೂತೋನ ಭವಿಷ್ಯತಿ “ಎಂಬಂತೆ ಹಿಂದೆಂದೂ ಹುಟ್ಟಿರದ, ಮುಂದೆಯೂ ಜನಿಸಲಾರದಂತಹ ಮೇರು ವ್ಯಕ್ತಿಯ ಹುಟ್ಟಿದ ದಿನವನ್ನು “ಇಂಜಿನಿಯರ್ ದಿನ”ವನ್ನಾಗಿ ಆಚರಿಸುತ್ತೇವೆ .
ಎಂಜಿನಿಯರ್ ಅಂದ್ರೆ?
ಸಾಮಾನ್ಯವಾಗಿ ಹೇಳುವುದಾದರೆ ಎಂಜಿನಿಯರ್ ಎನ್ನುವವನು/ವಳು ಒಬ್ಬ ಕ್ರಿಯಾಶೀಲ ವ್ಯಕ್ತಿ . ವೈಜ್ಞಾನಿಕವಾಗಿ ಎಲ್ಲವನ್ನೂ ತಾನು ಹಿಡಿದ ಪೆನ್ನಿನಿಂದ ಹಾಗೂ ತನ್ನಲ್ಲಿರುವ ಬುದ್ಧಿವಂತಿಕೆಯಿಂದ ಮನುಷ್ಯರು ವಾಸಿಸಲು ಸೂಕ್ತವಾದ ವಾತಾವರಣವನ್ನು ತನ್ನದೇ ವೈಜ್ಞಾನಿಕ ದೃಷ್ಟಿಕೋನದಲ್ಲಿ ಸೃಷ್ಟಿಸುವವನು ಇಂಜಿನಿಯರ್.
ಈ ವಿಷ್ಯ ಸ್ವಲ್ಪ ತಿಳ್ಕೊಳ್ಳಿ:
ಎಂಜಿನಿಯರಿಂಗ್ ಎಂದರೆ ಕೇವಲ ದೊಡ್ಡ ದೊಡ್ಡ ಕಟ್ಟಡಗಳು, ಕಂಪ್ಯೂಟರ್ ಮಾತ್ರವಲ್ಲ ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಗೆ ತಕ್ಕಂತೆ ಅವನ ಆಲೋಚನೆ ,ಹಾಗೆಯೇ ಅವನ ಸೌಲಭ್ಯಗಳು ಹೆಚ್ಚುತ್ತಲೇ ಹೋಗುತ್ತದೆ ಹಾಗೆಯೇ ಕಾಲ ಬದಲಾದಂತೆ ಮನರಂಜನೆಗಳನ್ನು ಅವನು ಯಾಂತ್ರಿಕವಾಗಿ ಬಯಸುತ್ತಾನೆ ಹಾಗೆ ಅವನು ಬದಲಾದಂತೆ ತಂತ್ರಜ್ಞಾನ ಕೂಡ ಬದಲಾಗುತ್ತದೆ.
ಎಷ್ಟೋ ವರ್ಷಗಳಿಂದ’ ಅಭಿವೃದ್ಧಿ ಹೊಂದುತ್ತಿರುವ’ ರಾಷ್ಟ್ರವಾಗಿಯೇ ಉಳಿದಿರುವ ಭಾರತ ‘ಅಭಿವೃದ್ಧಿ ಹೊಂದಿರುವ’ ರಾಷ್ಟ್ರವಾಗಬೇಕಾದರೆ ತಂತ್ರಜ್ಞಾನ ಕ್ರಾಂತಿಯಾಗಬೇಕು. ನಮ್ಮ ದೇಶ ಸ್ವಾತಂತ್ರ್ಯ ಪಡೆದ ನಂತರ ಆದಂತಹ ಹಸಿರು ಕ್ರಾಂತಿಯಿಂದ ಆಹಾರ ಕೊರತೆ ನಿಭಾಯಿಸಲು ಸಾಧ್ಯವಾಯಿತು ಅಷ್ಟೇ .
ಆದರೆ ತಂತ್ರಜ್ಞಾನ ಆಧಾರಿತ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ಕೊಳ್ಳುವುದು ಹಾಗೆ ಇನ್ಯಾವುದೇ ಕ್ಷೇತ್ರಕ್ಕೆ ಬೇಕಾದ ಅತ್ಯಾಧುನಿಕ ಉಪಕರಣಗಳನ್ನು ನಮ್ಮನಮ್ಮ ದೇಶದಲ್ಲಿ ಸಿದ್ಧಪಡಿಸುವುದು ಇವತ್ತಿನ ಅತಿಮುಖ್ಯ ಅವಶ್ಯಕತೆಗಳು. ಈ ಕಾರಣಗಳಿಂದಾಗಿ ಇಂಜಿನಿಯರಿಂಗ್ ಅನಿವಾರ್ಯ.
ಸೃಜನಶೀಲತೆ ಮುಖ್ಯ:
ಹೌದು ಇಂದಿನ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಎಂಬುದು ಕಡಿಮೆಯಾಗುತ್ತಿದೆ. ಕೇವಲ ಪಠ್ಯಪುಸ್ತಕದ ವಿಷಯಗಳಿಗೆ ಮಾತ್ರ ವಿದ್ಯಾರ್ಥಿ ಗಳನ್ನು ಸೀಮಿತಗೊಳಿಸಿದೆ. ಅವರಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಲಿಯುತ್ತಾ ಬಂದಿರುವ ಪರಿಕಲ್ಪನೆಗಳನ್ನು ಹೊರತುಪಡಿಸಿ ವಾಸ್ತವದಲ್ಲಿರುವ ಉದಾಹರಣೆಗಳನ್ನು ತಿಳಿದುಕೊಂಡು ವಾಸ್ತವದಲ್ಲಿರುವ ಇಂಜಿನಿಯರಿಂಗ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.ಆಗ ಅವರಲ್ಲಿ ಸೃಜನ ಶೀಲತೆ ವೃದ್ಧಿಸುತ್ತದೆ .
ಎಂಜಿನಿಯರಿಂಗ್ ಪದವೀಧರರಿಗೆ ಕೆಲ್ಸ ಇಲ್ವಾ?
ಸಮೀಕ್ಷೆಗಳ ಪ್ರಕಾರ ಈಗ ಭಾರತದಲ್ಲಿ 350೦ ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರತಿ ವರ್ಷ 15 ಲಕ್ಷ ಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಪದವಿ ಮುಗಿಸುತ್ತಿರುವ ಪ್ರತಿಯೊಬ್ಬ ಪದವೀಧರರು ಕ್ರಿಯಾಶೀಲರಾಗಿರುವುದಿಲ್ಲ,
ಉದ್ಯಮಿ ಗಳಿಗೆ ಬೇಕಾದ ಕ್ರಿಯಾಶೀಲತೆ, ವೃತ್ತಿಪರತೆ ಕಡಿಮೆ ಇರುವವರಿಗೆ ಉದ್ಯೋಗಾವಕಾಶಗಳು ಕಡಿಮೆ. ಆದರೆ ವಿಷಯ ಜ್ಞಾನ ಮತ್ತು ಕ್ರಿಯಾಶೀಲತೆ ಹೊಂದಿರುವ ಪ್ರತಿಯೊಬ್ಬರಿಗೂ ಸಾಕಷ್ಟು ಉದ್ಯೋಗಗಳಿವೆ. ಮೇಲಾಗಿ ಪದವಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳು ಕೈತುಂಬ ಸಂಬಳ ನೀಡುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಬೇಕೆನ್ನುವ ಆಲೋಚನೆ ಯುವ ಜನತೆಯಲ್ಲಿ ಕಡಿಮೆಯಾಗಬೇಕು. ಸ್ವ ಉದ್ಯಮಿಗಳಾಗುವತ್ತ ಕೂಡ ಅವರು ಗಮನ ಹರಿಸುವುದು ಬಹಳ ಮುಖ್ಯ.
ಎಂಜಿನಿಯರಿಂಗ್ ಎನ್ನುವುದು ವಿಜ್ಞಾನದ ಸಿದ್ಧಾಂತಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕ್ರಿಯಾಶೀಲ ಮಾರ್ಗವಾಗಿದೆ. ಆದರೆ ಕೇವಲ ಯಂತ್ರಗಳನ್ನು ಪ್ರೀತಿಸುವ ಎಂಜಿನಿಯರ್ ಗಳಿಗೆ ಒಂದು ಕಿವಿಮಾತು, ಜಗತ್ತನ್ನು ತೆರೆದ ಕಣ್ಣಿಂದ ನೋಡುವ ಪ್ರಯತ್ನವನ್ನು ಮಾಡಬೇಕು. ಜೊತೆಗೆ ಪರಿಸರದಲ್ಲಿನ ಸಮಸ್ಯೆಗಳನ್ನು ನಿವಾರಿಸಲು, ಪರಿಹಾರವನ್ನು ಕಂಡು ಹಿಡುವ ಜೊತೆಗೆ ಅದು ಮುಂದಿನ ಪೀಳಿಗೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು .ಅದೇನೇ ಆದರೂ ನನ್ನ ಎಲ್ಲ ಎಂಜಿನಿಯರಿಂಗ್ ಸ್ನೇಹಿತರಿಗೆ ಎಂಜಿನಿಯರಿಂಗ್ ದಿನದ ಶುಭಾಶಯಗಳು.












