ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಅರಿವು ಕಾರ್ಯಕ್ರಮ

ಉಡುಪಿ: ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆಯ ಪ್ರಯುಕ್ತ ಇಂದಿರಾ ನಗರದ ಸರಕಾರಿ ಪ್ರೌಢಶಾಲೆ ಯ ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉಡುಪಿ ಚೈಲ್ಡ್ ಲೈನ್-1098 ನ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರೈಲ್ವೆ ರಕ್ಷಣಾ ಪಡೆ ಇನ್ಸಪೆಕ್ಟರ್ ಪಿ.ವಿ ಮಧುಸೂದನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಮಕ್ಕಳು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ವಿಷಯಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿ ಹೇಳಿದರು. ಮಕ್ಕಳಿಗೆ ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಅಥವಾ ಪೋಲಿಸರಿಗೆ ಕರೆ ಮಾಡಿ ಸಹಾಯವನ್ನು ಪಡೆಯಲು ಹೇಳಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂದಿರಾ ನಗರ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳು ಅಪರಿಚಿತರ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಸಜೀರ್, ಶಾಲಾ ಶಿಕ್ಷಕ ವೃಂದದವರು, ಚೈಲ್ಡ್ ಲೈನ್-1098 ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚೈಲ್ಡ್ ಲೈನ್-1098 ಕೇಂದ್ರದ ಸಂಯೋಜಕಿ ಕು. ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.