ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಘಟಕ ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿತ್ತು.
ಕಾರ್ಯಾಗಾರದಲ್ಲಿ ನೇತ್ರ ಮತ್ತು ಸಂಬಂಧಿತ ಕಾಯಿಲೆಗಳ ಶಿಕ್ಷಣ ಹಾಗೂ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಕುರಿತು ಶಿಕ್ಷಣ ನೀಡಲಾಯಿತು.
ಮಾಹೆ ಮಣಿಪಾಲದ ಇಂಟರಾಕ್ಟ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನಾಗಭೂಷಣ ಉಡುಪ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ನೇತ್ರಪ್ರಧಾನ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಕ್ರಮವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಯೋಗದೊಂದಿಗೆ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು, ಇದರ ಮೂಲಕ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲರೂ ಅಂಧತ್ವದಿಂದ ಮುಕ್ತರಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಂಸಿ ಡೀನ್ ಡಾ ಪದ್ಮರಾಜ್ ಹೆಗ್ಡೆ ಮಾತನಾಡಿ, ಈಗ ನಾವು ಕಂಪ್ಯೂಟರ್ ಮತ್ತು ತಂತ್ರಜ್ಞಾನ ಕಾಲದಲ್ಲಿ ಇದ್ದೇವೆ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರೂ ಮೊಬೈಲ್ ಮತ್ತು ದೂರದರ್ಶನದಿಂದ ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸೂಕ್ತ ಸಮಯದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಇನ್ನು ಮುಂದೆಯೂ ಜಿಲ್ಲಾ ಅರೋಗ್ಯ ಇಲಾಖೆಯ ಯಾವುದೇ ಕಾರ್ಯಕ್ರಮಕ್ಕೆ ನಾವು ಸಹಕರಿಸಲಿದ್ದೇವೆ ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಲತಾ ನಾಯಕ್ ಮಾತನಾಡಿ, ಈ ತರಬೇತಿ ಕಾರ್ಯಕ್ರಮದಿಂದ ಹಳ್ಳಿಯಲ್ಲಿಯೂ ನೇತ್ರಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ಪತ್ತೆಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ಹಸ್ತಾಂತರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಸ್ತೂರ್ಬಾ ಆಸ್ಪತ್ರೆಯ ಡಾ.ನೀತಾ ಕೆ.ಐ.ಆರ್, ಸಹ ಪ್ರಾಧ್ಯಾಪಕಿ, ಡಾ.ಸುಶನ ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ ಮತ್ತು ಡಾ.ರಶ್ಮಿ ಕೆ ಸಹ ಪ್ರಾಧ್ಯಾಪಕಿ ಭಾಗವಿಸಿದ್ದರು.
ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ ಅಶ್ವಿನಿ ಕುಮಾರ್ ಗೋಪಾಡಿ ಸ್ವಾಗತಿಸಿ , ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕಾಮತ್ ವಂದಿಸಿದರು. ಡಾ ಶ್ರುತಿ ಕಾರ್ಯಕ್ರಮ ನಿರೂಪಿಸಿದರು
ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 250 ಸಮುದಾಯ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡರು. .