ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೀವನ ಕೌಶಲ್ಯ ಕುರಿತು ಕಾರ್ಯಾಗಾರ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ ಜೀವನ ಕೌಶಲ್ಯ ಕುರಿತು ಜಾಗೃತಿ ಕಾರ್ಯಾಗಾರವನ್ನು ಇತ್ತೀಚಿಗೆ ಕಾಲೇಜಿನ
ಆವರಣದಲ್ಲಿ ಆಯೋಜಿಸಿತ್ತು.

ಎಂಐಟಿ ಮಣಿಪಾಲದ ಸಹ ಪ್ರಾಧ್ಯಾಪಕ ಡಾ. ಗುರುಮೂರ್ತಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ “ಲೈಫ್ ಸ್ಕಿಲ್: ಟ್ಯಾಲೆಂಟ್+ಎನ್*ಎಕ್ಸ್= ಮಿರಾಕಲ್” ಎಂಬ ಸೂತ್ರದ ಮೂಲಕ ವಿವರಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು ಇಲ್ಲದಿದ್ದರೆ ಅವರ ಸಾಧನೆಯು ಅಸ್ಪಷ್ಟವಾಗುತ್ತದೆ ಎಂದು ತಿಳಿಸಿ, ಜೀವನದ ಯಶಸ್ಸಿಗೆ ಬೇಕಾದ ಅಗತ್ಯ ತತ್ವಗಳನ್ನು ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ತಲುಪಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಮತ್ತು ನವೀನ
ಆಲೋಚನೆಯನ್ನು ಹೊಂದಬೇಕಾಗುತ್ತದೆ ಅಲ್ಲದೆ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು
ಉತ್ತಮ ನಾಯಕತ್ವದ ಗುಣಗಳು, ಪರಿಣಾಮಕಾರಿ ಸಮಯ ನಿರ್ವಹಣೆ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುವುದು ಅಗತ್ಯವಾಗಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು
ಅಗತ್ಯವಾದ ಮಾಹಿತಿಯನ್ನು ಒದಗಿಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಕಾರ್ಯಾಗಾರದ ಮಹತ್ವದ ಬಗ್ಗೆ ವಿವರಿಸಿದರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು
ಪಡೆಯುವಂತೆ ತಿಳಿಸಿದರು.

ಕಾರ್ಯಾಗಾರದಲ್ಲಿ ಕೌನ್ಸೆಲಿಂಗ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು ಮತ್ತು ಸದಸ್ಯರು, ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಎಚ್ ಜೆ ಮತ್ತು ಪ್ರಾಧ್ಯಾಪಕಿ ಉಷಾ ಪಾರ್ವತಿ ನಿರೂಪಿಸಿದರು.