ಬಂಟ್ವಾಳ: ಜ. 26ರಂದು ಅಮ್ಮುಂಜೆ ಗ್ರಾಮದಲ್ಲಿ ನಡೆದ ಬೆನೆಡಿಕ್ಟ್ ಕಾರ್ಲೋ (72) ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊದಲು ಅಸಹಜ ಸಾವು ಪ್ರಕರಣವೆಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ ಬಳಿಕ ತನಿಖೆ ನಡೆಸಿದಾಗ ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂದು ಗೊತ್ತಾಗಿತ್ತು.
ಹಣದಾಸೆಗಾಗಿ ಮನೆ ಒಡತಿಯನ್ನೇ ಕೆಲಸದಾಳು ಅಮ್ಟಾಡಿ ಗ್ರಾಮದ ಎಲ್ಮಾ ಪ್ರಶ್ಚಿತಾ ಬರೆಟ್ಟೊ (25) ಹಾಗೂ ಆಕೆಯ ಸ್ನೇಹಿತರಾದ ನರಿಕೊಂಬು ನಿವಾಸಿ ಸತೀಶ ಹಾಗೂ ಚರಣ್ ಎಂಬ ಮೂವರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ಅದರಂತೆ ಈ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆ ಕೆಲಸದಾಕೆ ಸ್ನೇಹಿತರೊಂದಿಗೆ ಸೇರಿಕೊಂಡು ವೃದ್ಧೆಯ ಚಿನ್ನಾಭರಣ ದೋಚಲು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವುದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












