ಕಾರ್ಮಿಕರ ರಕ್ಷಣಾ ಕಾರ್ಯ ಸ್ಥಗಿತ : ಉತ್ತರಕಾಶಿ: ಮತ್ತೊಂದು ತಾಂತ್ರಿಕ ದೋಷ

ಉತ್ತರಕಾಶಿ (ಉತ್ತರಾಖಂಡ): ಗುರುವಾರ ರಾತ್ರಿ ತಾಂತ್ರಿಕ ದೋಷ ಕಾಣಿಸಿಕೊಂಡು ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ತಂಡ ತಯಾರಿ ಮಾಡಿಕೊಂಡಿತ್ತು. ಆದರೆ ಡ್ರಿಲ್ಲಿಂಗ್​ ಪ್ರಾರಂಭಿಸುವ ಹೊತ್ತಿಗೆ ಮತ್ತೆ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.ದುರಸ್ತಿಗೊಂಡಿದ್ದ ಅಗರ್​ ಯಂತ್ರದಲ್ಲಿ ಇದೀಗ ಮತ್ತೊಮ್ಮೆ ತಾಂತ್ರಿಕ ದೋಷ ಎದುರಾಗಿದ್ದು, ಡ್ರಿಲ್ಲಿಂಗ್​ ಅನ್ನು ಸ್ಥಗಿತಗೊಳಿಸಿ, ಯಂತ್ರವನ್ನು ಹೊರತರಲಾಗುತ್ತಿದೆ.ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ, ಕಾರ್ಯಾಚರಣೆಯನ್ನು ಪರಿಶೀಲಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ತ್ವರಿತ ಗತಿಯಲ್ಲಿ ಹಾಗೂ ಸಂಪೂರ್ಣ ಎಚ್ಚರಿಕೆಯಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಒಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 13 ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಸಂಜೆ ವೇಳೆಗೆ ಒಳಗೆ ಸಿಲುಕಿರುವ ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಗುರುವಾರ ರಾತ್ರಿ ಇನ್ನೇನು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳಬೇಕಿದ್ದ ಸಮಯಕ್ಕೆ ಡ್ರಿಲ್ಲಿಂಗ್​ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದ ಕಾರಣ ಕಾರ್ಯಾಚರಣೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.ಗುರುವಾರದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ, ಕಾರ್ಯಾಚರಣೆಯನ್ನು ಪರಿಶೀಲಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ತ್ವರಿತ ಗತಿಯಲ್ಲಿ ಹಾಗೂ ಸಂಪೂರ್ಣ ಎಚ್ಚರಿಕೆಯಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉತ್ತರಕಾಶಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಪ್ರಧಾನಿ ಮೋದಿ ಕೂಡ ನಿರಂತರವಾಗಿ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಪರಿಹಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಕಾರ್ಯಾಚರಣೆ ಮುಗಿದು ಎಲ್ಲಾ ಕಾರ್ಮಿಕರು ಹೊರಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ನವೆಂಬರ್​ 12 ರಂದು ಬೆಳಗ್ಗೆ 5.30ರ ಸುಮಾರಿಗೆ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರದಲ್ಲಿ 4.5 ಕಿ.ಮೀ ಉದ್ದದ ನಿರ್ಮಾಣ ಹಂತದಲ್ಲಿರುವ ಸುರಂಗದ ಒಳಗೆ ಸುಮಾರು 200 ಮೀಟರ್​ಗಳಷ್ಟು ಭೂಕುಸಿತ ಸಂಭವಿಸಿತ್ತು. ಈ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸುರಂಗದ ಒಳಗೆ ಸಿಲುಕಿದ್ದು ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. 13 ದಿನಗಳು ಕಳೆದರೂ ರಕ್ಷಣಾ ತಂಡ ಯಾವುದೇ ಯಶಸ್ಸು ಸಾಧಿಸಿಲ್ಲ. ಎಲ್ಲವೂ ಸರಿಯಾಗಿ ನಡೆದಿದ್ದರೆ, ಶುಕ್ರವಾರ ಸಂಜೆ ವೇಳೆಗೆ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬರುತ್ತಿದ್ದರು.