ಕೊಂಕಣ ರೈಲು ಮಾರ್ಗದಲ್ಲಿ ಕಾಮಗಾರಿ: ಜು.24ರಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯ; ಕೊಂಕಣ ರೈಲ್ವೆ ಪ್ರಕಟಣೆ.

ಉಡುಪಿ: ಕೊಂಕಣ ರೈಲು ಮಾರ್ಗದ ಲೋಲಿಮ್ ಹಾಗೂ ಅಸ್ನೋಟಿ ನಿಲ್ದಾಣಗಳ ನಡುವೆ ಬರುವ ಜುಲೈ 24ರ ಗುರುವಾರ ಬೆಳಗ್ಗೆ 10:20ರಿಂದ ಅಪರಾಹ್ನ 1:50ರವರೆಗೆ ಹಳಿ ಅಭಿವೃದ್ಧಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮೂರೂವರೆ ಗಂಟೆಗಳ ಕಾಲ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಜು.24 ರಂದು ಅಂದು ಸಂಚರಿಸುವ ರೈಲು ನಂ.56616 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್ ರೈಲನ್ನು ಕುಮಟ ಮತ್ತು ಕಾರವಾರ ನಿಲ್ದಾಣಗಳ ಮಧ್ಯೆ 90 ನಿಮಿಷ ತಡೆ ಹಿಡಿಯಲಾಗುವುದು. ರೈಲು ನಂ.56615 ಮಡಗಾಂವ್ ಜಂಕ್ಷನ್- ಮಂಗಳೂರು ಪ್ಯಾಸೆಂಜರ್ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಮಡಗಾಂವ್ ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದೆ. ಈ ರೈಲು ಅಪರಾಹ್ನ 2:10ರ ಬದಲು 3:10ಕ್ಕೆ ಪ್ರಯಾಣ ಪ್ರಾರಂಭಿಸಲಿದೆ.

ಜು.23ರಂದು ಉದ್ನಾದಿಂದ ಹೊರಡುವ ರೈಲು ನಂ.09057 ಉದ್ನಾ- ಮಂಗಳೂರು ಜಂಕ್ಷನ್ ಸ್ಪೆಷಲ್ ರೈಲಿನ ಪ್ರಯಾಣವನ್ನು ಮಡಗಾಂವ್ ಜಂಕ್ಷನ್ ಹಾಗೂ ಕನಕೋನಾ ನಿಲ್ದಾಣಗಳ ನಡುವೆ 30 ನಿಮಿಷಗಳ ಕಾಲ ತಡೆ ಹಿಡಿಯಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.