ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್‌ 2023 : ಉಜ್ಬೇಕಿಸ್ತಾನ್ ಎದುರು ಶುಭಾರಂಭ ಮಾಡಿದ ಭಾರತ

ನವದೆಹಲಿ: ಜಪಾನಿನ ಗಿಫು ಪ್ರಿಫೆಕ್ಚರ್‌ನ ಕಕಮಿಗಹರಾದಲ್ಲಿ ಇಂದು ನಡೆದ 2023 ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್‌ ಭಾರತ ಶುಭಾರಂಭ ಮಾಡಿದೆ.
ಭಾರತದ ಪರ ವೈಷ್ಣವಿ ವಿಠಲ್ ಫಾಲ್ಕೆ (3′, 56′), ಮುಮ್ತಾಜ್ ಖಾನ್ (6′, 44′, 47′, 60′), ಅನು (13′, 29′, 30′, 38′, 43′, 51′) ಸುನ್ಲಿತಾ ಟೊಪ್ಪೊ (17′, 17′), ಮಂಜು ಚೌರಾಸಿಯಾ (26′), ದೀಪಿಕಾ ಸೊರೆಂಗ್ (18′, 25′), ದೀಪಿಕಾ (32′, 44′, 46′, 57′), ಮತ್ತು ನೀಲಂ (47′) ಒಬ್ಬರ ನಂತರ ಒಬ್ಬರಂತೆ ಗೋಲ್​ಗಳನ್ನು ಗಳಿಸಿದರು. ಟೂರ್ನಮೆಂಟ್‌ನಲ್ಲಿ ಭಾರತದ ಆರಂಭಿಕ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ತಂಡವನ್ನು 22-0 ಗೋಲುಗಳಿಂದ ಸೋಲಿಸಿದ ಇಂಡಿಯನ್​ ಜೂನಿಯರ್ ಮಹಿಳಾ ಹಾಕಿ ತಂಡ ಮೊದಲ ಪಂದ್ಯದಲ್ಲೇ ಗೆಲುವಿನ ಕೇಕೆ ಹಾಕಿದೆ.


ಮೊದಲಿಗೆ ವೈಷ್ಣವಿ ವಿಠ್ಠಲ್ ಫಾಲ್ಕೆ (3′) ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರೆ, ನಂತರ ಮುಮ್ತಾಜ್ ಖಾನ್ (6′) ಫೀಲ್ಡ್ ಗೋಲು ಗಳಿಸಿ ಭಾರತ ತಂಡದ ಮುನ್ನಡೆ ಹೆಚ್ಚಿಸಿದರು. ಅನು (13′) ತಂಡದ ಸ್ಕೋರ್ ಗೆ ಒಂದು ಗೋಲು ಸೇರಿಸಿದರು. ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು 3-0 ಮುನ್ನಡೆಯೊಂದಿಗೆ ಆರಂಭಿಕ ಕ್ವಾರ್ಟರ್ ಅನ್ನು ಮುಗಿಸಿತ್ತು.
ಭಾರತವು ಆರಂಭದಿಂದಲೇ ಉಜ್ಬೇಕಿಸ್ತಾನದ ಮೇಲೆ ಆಕ್ರಮಣವನ್ನು ಮುಂದುವರೆಸಿತು. ಇದು ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಟದಲ್ಲಿ ಆರಂಭಿಕ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟಿತು.
ಎರಡನೇ 15 ನಿಮಿಷದ ಅವಧಿಯಲ್ಲಿ ಮೊದಲ ಕ್ವಾರ್ಟರ್‌ನಂತೆಯೇ ಇತ್ತು. ಆರಂಭದಿಂದ ಭಾರತವು ಚೆಂಡನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿತ್ತು. ಸ್ಥಿರವಾದ ಆಕ್ರಮಣಕಾರಿ ಫಾರ್ಮ್‌ನೊಂದಿಗೆ ಆಟದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿತು. ಸುನೀಲಿತಾ ಟೊಪ್ಪೊ (17′, 17′), ಮಂಜು ಚೌರಾಸಿಯಾ (26) ಲೀಡನ್ನು ಮುಂದುವರೆಸಿದರು. ನಂತರ ದೀಪಿಕಾ ಸೊರೆಂಗ್ (18′, 25′), ಅನು (29′, 30′) ಗೋಲು ಗಳಿಸಿ ಭಾರತಕ್ಕೆ 10-0 ಮುನ್ನಡೆ ತಂದುಕೊಟ್ಟರು.
ಉತ್ತಮ ಮುನ್ನಡೆ ಹೊಂದಿದ್ದರೂ, ಭಾರತ ತಂಡವು ಮೂರನೇ ಕ್ವಾರ್ಟರ್‌ನಲ್ಲಿ ಗತಿಯನ್ನು ಕುಂಟಿಸಲಿಲ್ಲ. ದೀಪಿಕಾ (32′) ಪೆನಾಲ್ಟಿ ಕಾರ್ನರ್‌ನಿಂದ ಮೊದಲು ಗೋಲು ಗಳಿಸಿದರೆ, ಅನು (38′, 43′) ಗೋಲು ಗಳಿಸಿದರು. ಇನ್ನೆರಡು ಗೋಲು ಗಳಿಸಿ ಭಾರತ 13-0 ಮುನ್ನಡೆ ಸಾಧಿಸಲು ನೆರವಾದರು. ಸ್ವಲ್ಪ ಸಮಯದ ನಂತರ, ಮುಮ್ತಾಜ್ ಖಾನ್ (44′) ಮತ್ತು ದೀಪಿಕಾ (44′) ಪಂದ್ಯದ ತಮ್ಮ ಎರಡನೇ ಗೋಲು ಗಳಿಸಿದರು, ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ ಭಾರತದ ಮುನ್ನಡೆಯನ್ನು 15-0 ಯ ಮುನ್ನಡೆಯನ್ನು ಉಳಿಸಿಕೊಂಡಿತ್ತಲ್ಲದೇ ಎದುರಾಳಿಗೆ ಒಂದು ಗೋಲ್​ಗೂ ಅವಕಾಶ ಕೊಡಲಿಲ್ಲ.
ನಾಲ್ಕನೇ ಕ್ವಾರ್ಟರ್‌ನಲ್ಲಿ ಅವರು ದೀಪಿಕಾ (46′), ಮುಮ್ತಾಜ್ ಖಾನ್ (47′), ಮತ್ತು ನೀಲಂ (47′) ಮೂಲಕ ಮೂರು ತ್ವರಿತ ಗೋಲುಗಳನ್ನು ಗಳಿಸಿ ತಂಡವನ್ನು 18-0 ಗೆ ಕೊಂಡೊಯ್ದರು. ಆದಾಗ್ಯೂ, ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಅನು (51′) ಗೋಲು ಗಳಿಸಿದರು, ಇದು ಪಂದ್ಯದ ಅವರ ಆರನೇ ಗೋಲಾಗಿತ್ತು. ಕೊನೆಯ ಕೆಲ ನಿಮಿಷಗಳಿದ್ದಾಗ ವೈಷ್ಣವಿ ವಿಠಲ್ ಫಾಲ್ಕೆ (56′), ದೀಪಿಕಾ (57′) ಮತ್ತು ಮುಮ್ತಾಜ್ ಖಾನ್ (60′) ಗೋಲು ಪಡೆದು ಪಂದ್ಯವನ್ನು 22- ಶೂನ್ಯದಿಂದ ಅಂತ್ಯ ಮಾಡಿದರು.
ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು ಜೂನ್ 5 ರಂದು ಮಲೇಷ್ಯಾ ವಿರುದ್ಧ ಎರಡನೇ ಪೂಲ್ ಪಂದ್ಯವನ್ನು ಆಡಲಿದೆ ಎಂದು ತಿಳಿದು ಬಂದಿದೆ