ಉಡುಪಿ: ಮಹಿಳಾ ಸಬಲೀಕರಣ ಎನ್ನುವುದು ಹಿಂದಿಕ್ಕಿಂತಲೂ ಇಂದು ಹೆಚ್ಚು ವೇಗವನ್ನು ಪಡೆದುಕೊಂಡಿದ್ದು, ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಸಾಧನೆಯನ್ನು ತೋರ್ಪಡಿಸುತ್ತಿದ್ದಾರೆ. ಆದರೆ ಇಷ್ಟೆಲ್ಲ ಬದಲಾವಣೆಗಳು ಆಗಿದ್ದರೂ ಸಹ ಭಾರತದಲ್ಲಿ ಓರ್ವ ಮಹಿಳೆ ರಾತ್ರಿ ವೇಳೆ ಸುರಕ್ಷಿತವಾಗಿ ಹೋಗುವಂತಹ ಪರಿಸ್ಥಿತಿ ಇನ್ನೂ ನಿರ್ಮಾಣ ಆಗಿಲ್ಲ ಎಂದು ವಕೀಲೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ವಿಜಯಲಕ್ಷ್ಮೀ ಹೇಳಿದರು.
ಭಾರತೀಯ ಲೆಕ್ಕಪರಿಶೋಧಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಉಡುಪಿಯ ಲೆಕ್ಕಪರಿಶೋಧಕರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಬಾಯಿ ಮಾತಿನಲ್ಲಿ ಮಾತ್ರ ಬೇಟಿ ಪಡಾವೋ ಬೇಟಿ ಬಚಾವೋ ಹೇಳುತ್ತಿದೆ ಹೊರತು, ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು. ಹೆಣ್ಣುಮಕ್ಕಳ ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ, ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಆದ್ದರಿಂದ ಮಹಿಳಾ ಸುರಕ್ಷತೆ ಬಗ್ಗೆ ತಳಮಟ್ಟದಿಂದ ಜಾಗೃತಿ ಮೂಡಿಸುವ ಕೆಲಸ
ಆಗಬೇಕಿದ್ದು, ಮಹಿಳೆಯರು ಇನ್ನಷ್ಟು ಬಲಾಢ್ಯರಾಗಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು
ಮಹಿಳೆಯರು ಯಾವಾಗ ಸ್ವಂತ ನಿರ್ಧಾರ ಕೈಗೊಳ್ಳಲು ಸಮರ್ಥರಾಗುತ್ತಾರೆ. ತಮ್ಮ ಘನತೆಯ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಆಗಿನಿಂದ ಸರಿಯಾದ ದಿಕ್ಕಿನಲ್ಲಿ ಮಹಿಳಾ ಸಬಲೀಕರಣ ನಡೆಯುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷೆ ರೇಖಾ ದಯಾನಂದ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪ್ರದೀಪ್ ಜೋಗಿ, ಕವಿತಾ ಎಚ್. ಪೈ, ಆಂಡ್ರಿಯಾ ಲಿವಿಸ್, ಸುಪ್ರಿಯಾ
ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.