ಉಡುಪಿ: ಮಲ್ಪೆ ಬಳಿ ಹಸುವಿಗೆ ಹುಲ್ಲು ತರಲು ಹೋದ ಮಹಿಳೆಗೆ ಹೆಜ್ಜೇನು ಕಡಿದು ಸಾವನ್ನಪ್ಪಿರುವ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸಮೀಪ ನಡೆದಿದೆ.
ಕಟಪಾಡಿಯಲ್ಲಿಯೂ ಹೆಜ್ಜೇನು ದಾಳಿ
ಕಟಪಾಡಿ ಏಣಗುಡ್ಡೆ ರಾಜರತ್ನ ರಸ್ತೆಯ ಬಳಿಯೂ ಹಲವು ಮಂದಿಗೆ ಹೆಜ್ಜೇನು ದಾಳಿ ನಡೆಸಿದ್ದು, ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡ ಘಟನೆ ನಡೆದಿದೆ.
ಈ ರಸ್ತೆಯ ತಿರುವಿನ ಹುಣಸೆ ಮರದಲ್ಲಿ ಹೆಜ್ಜೇನುಗಳು ಬೃಹತ್ ಗಾತ್ರದ ಗೂಡು ಕಟ್ಟಿವೆ. ಗಿಡುಗವೊಂದು ಗೂಡಿಗೆ ದಾಳಿ ನಡೆಸಿದ ಕಾರಣ ಕೆರಳಿದ ಹೆಜ್ಜೇನುಗಳು ದಾರಿಯಲ್ಲಿ ಸಾಗುತ್ತಿದ್ದ ಜನರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಸ್ಥಳೀಯ ಗ್ರಾ.ಪಂ. ಸದಸ್ಯ, ಕಚೇರಿ ಕೆಲಸಕ್ಕೆ ತೆರಳುತ್ತಿದ್ದ ಓರ್ವ ಮಹಿಳೆ, ಮೀನು ಮಾರಾಟಕ್ಕೆ ಬಂದ ವ್ಯಾಪಾರಿ, ಮನೆಕೆಲಸಕ್ಕೆ ತೆರಳುತ್ತಿದ್ದ ಹೊರ ಜಿಲ್ಲಾ ದಿನಗೂಲಿ ಕಾರ್ಮಿಕ ಮಹಿಳೆಯ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ಕೆಲವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಲಾಗಿದ್ದರೆ ಮಹಿಳೆಯೋರ್ವರ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ರಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.