ಕೆಮ್ಮಣ್ಣು: ಕಡಲ ತೀರದ ರಕ್ಷಣೆ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸೇವ್ ಮರೈನ್ ಲೈಫ್’ ಬೈಕ್ ಯಾತ್ರೆಯ ಮೂಲಕ ಬೆಂಗಳೂರಿನ ಸ್ವಾತಿ ಆರ್ ಮತ್ತು ಅನಿತಾ ಎಂ ಮಂಗಳವಾರ ಹೂಡೆ ಕಡಲ ತೀರದಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ಭಾರತ ಸರ್ಕಾರ, ನೆಹರು ಯುವ ಕೇಂದ್ರ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ತೋನ್ಸೆ ಗ್ರಾಮ ಪಂಚಾಯತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.), ನಿರ್ಮಲ್ ತೋನ್ಸೆ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.
ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲೆಯ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿ’ಸೋಜ ಸ್ವಾಗತಿಸಿ ಶುಭ ಹಾರೈಸಿ, ನೆಹರೂ ಯುವ ಕೇಂದ್ರ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದು ಜಿಲ್ಲೆಯ ಸಂಘ ಸಂಸ್ಥೆಗಳು ಅಭೂತಪೂರ್ವ ಬೆಂಬಲವನ್ನು ನೀಡಿವೆ. ಸ್ವಚ್ಛತೆಯು ಒಂದು ದಿನದ ವಿಚಾರವಲ್ಲ, ಅದು ನಿತ್ಯ ನಿರಂತರವಾದರೆ ಮಾತ್ರ ಬದಲಾವಣೆ ಸಾಧ್ಯ ಎಂದರು.
ಕನ್ನಡದ ಮೊದಲ ಮಹಿಳಾ ಮೋಟೋ ವ್ಲಾಗರ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಬೆಂಗಳೂರಿನ ಸ್ವಾತಿ ಆರ್ ಮಾತನಾಡುತ್ತಾ, ಏಕ ಬಳಕೆಯ ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಮಾರಕವಾಗಿದ್ದು ಜನರ ಮನೋಭಾವದಲ್ಲಿ ಬದಲಾವಣೆಯಾದರೆ ಪರಿಸರ ಸಂರಕ್ಷಣೆಯ ಕೆಲಸ ಸುಲಭ ಸಾಧ್ಯ ಎಂದ ಅವರು ಉಡುಪಿ ಜಿಲ್ಲೆಯ ಎಲ್ಲಾ ಕಡಲ ತೀರಗಳಿಗೆ ಬ್ಲೂ ಫ್ಲಾಗ್ ಮನ್ನಣೆ ಸಿಗುವಂತಾಗಲಿ ಎಂದರು.
ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪ್ರೈಡ್, ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್ ಮತ್ತು ಮೊಟೋ ಟೋರ್ಕ್ ಪ್ರಾಯೋಜಕತ್ವದಲ್ಲಿ ಜಾಗೃತಿ ಮೂಡಿಸುವ ‘ಸೇವ್ ಮರೈನ್ ಲೈಫ್’ ಬೈಕ್ ಯಾತ್ರೆಗೆ ಅಕ್ಟೋಬರ್ 9 ರಂದು ಬೆಂಗಳೂರಿನ ವಿಧಾನಸೌಧದ ಎದುರು ಚಾಲನೆ ನೀಡಲಾಯಿತು.
ಅಕ್ಟೋಬರ್ 17 ರವರೆಗೆ ಈ ಜಾಗೃತಿ ಯಾತ್ರೆ ನಡೆಯಲಿದ್ದು, ರಾಜ್ಯದ ಎಲ್ಲಾ ಕಡಲ ತೀರಗಳಿಗೆ ಸುಮಾರು 1300 ಕಿಮೀ ಕ್ಕಿಂತ ಹೆಚ್ಚು ದೂರವನ್ನು ಬೈಕ್ ಮೂಲಕವೇ ಸಂಚರಿಸಿ, ಆಯ್ದ ಕಡೆಗಳಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದೇವೆ. ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆಗೆ ಸಂವಾದ ಕಾರ್ಯಕ್ರಮವೂ ಯಾತ್ರೆಯ ಭಾಗವಾಗಿದೆ ಎಂದು ಸ್ವಾತಿ ಆರ್. ಹೇಳಿದರು.
ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಸುಷ್ಮಾ, ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷ ಪ್ರವೀಣ್ ಕರ್ವಾಲೋ, ಕಾರ್ಯದರ್ಶಿ ಸುದರ್ಶನ್ ನಾಯಕ್, ಕೋಶಾಧಿಕಾರಿ ಗಣೇಶ್ ಡಿ., ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ಜೂಲಿಯಸ್ ಲೂವಿಸ್, ಗಣೇಶ್ ಪ್ರಸಾದ್ ಜಿ. ನಾಯಕ್, ಅಸ್ವಿನಿ, ಶ್ರದ್ಧಾ, ಸಂಜನಾ, ಸಮೀಕ್ಷಾ, ರಕ್ಷಿತ್, ಸುಕಾಂತ್ ಯು ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.