ಉಡುಪಿ: ತಾಯ್ನಾಡಿಗೆ ಮರಳುತ್ತಿದ್ದ ಮಾಲೀಕನ ಎಡವಟ್ಟಿನಿಂದ ಕುವೈಟ್ ನಲ್ಲಿ ಬಂಧನವಾಗಿದ್ದ ಉಡುಪಿ ಶಿರ್ವ ಮೂಲದ ಗಿರಿಜಾ(63) ಎಂಬುವವರು ಇಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕ್ಷೇಮವಾಗಿ ಬಂದಿಳಿದ್ದಾರೆ.
ಗಿರಿಜಾ ಅವರು ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಹಾಗೂ ಅನಾರೋಗ್ಯದ ಕಾರಣದಿಂದ ಅವರು ಊರಿಗೆ ಮರಳಲು ನಿರ್ಧರಿಸಿದ್ದರು.
ಸೆ.13ರಂದು ಇಂಡಿಗೋ ವಿಮಾನದ ಟಿಕೆಟ್ ತಾಯ್ನಾಡಿಗೆ ಬರುವ ಸಂಭ್ರಮದಲ್ಲಿದ್ದ ಗಿರಿಜಾಗೆ ಕುವೈಟ್ ಪೊಲೀಸರು ವಿಮಾನ ನಿಲ್ದಾಣದಲ್ಲಿ ದಿಢೀರ್ ಆಗಿ ಬಂಧಿಸುವ ಮೂಲಕ ಆಘಾತ ನೀಡಿದ್ದರು.
ಊರಿಗೆ ಬರುತ್ತಿದ್ದ ಗಿರಿಜಾ ಅವರಿಗೆ ಕೆಲಸ ಮಾಡುತ್ತಿದ್ದ ಮನೆ ಯಜಮಾನ ನಾಪತ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಮಂಗಳೂರು ಮತ್ತು ಉಡುಪಿಯ ಕುವೈಟ್ನಲ್ಲಿರುವ ಸಂಘಟನೆ ಮತ್ತು ಉದ್ಯಮಿಗಳ ಪ್ರಯತ್ನದಿಂದ ಗಿರಿಜಾ ಕ್ಷೇಮವಾಗಿ ಊರಿಗೆ ಮರಳಿದ್ದಾರೆ.