60 ವರ್ಷದ ವ್ಯಕ್ತಿಯನ್ನು ಮದುವೆಯಾಗಲು ಒಪ್ಪಿದ್ದ ಮಹಿಳೆ ಆಭರಣದೊಂದಿಗೆ ಪರಾರಿ.!

ಉಡುಪಿ ಎಕ್ಸ್‌ಪ್ರೆಸ್‌ ವರದಿ: ಅರವತ್ತು ವರ್ಷದ ವ್ಯಕ್ತಿಯೊಬ್ಬರು ತನ್ನನ್ನು ಮದುವೆಯಾಗಲು ಒಪ್ಪಿದ್ದ ಮಹಿಳೆಯಿಂದಲೇ ವಂಚನೆಗೆ ಒಳಗಾಗಿದ್ದಾರೆ.

ಸಾಗರ ತಾಲೂಕಿನ ಹೊಳೆಹೊನ್ನೂರಿನ ನಂಜುಂಡಪ್ಪ (60) ಮೋಸ ಹೋದವರು. ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದು, 7 ತಿಂಗಳ ಹಿಂದೆ ಪತ್ನಿ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆ ಮಾಡಿಕೊಳ್ಳಲು ಕನ್ನಡ ಮ್ಯಾಟ್ರಿಮೊನಿಯಲ್ಲಿ ಹೆಸರು ನೋಂದಾಯಿಸಿದ್ದರು.

ಬೆಂಗಳೂರಿನ ಯಲಹಂಕದ ಚಂದ್ರಿಕಾ ಎನ್ನುವ ಮಹಿಳೆ ನಂಜುಂಡಪ್ಪ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ನ.15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಊಟ ಮಾಡಿ ಬರ್ತಿನಿ ಅಂತಾ ಹೋಗಿದ್ದ ಮಹಿಳೆ ಚಿನ್ನದ ತಾಳಿಯೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.