ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ 2.5 ವರ್ಷಗಳ ಅವಧಿಯಲ್ಲಿ ಕಂದಾಯ, ಜಿಲ್ಲಾ ಪಂಚಾಯತ್, ಪೌರಾಡಳಿತ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮವಾದ ಸಹಕಾರವನ್ನು ನೀಡಿದ್ದು, ಇದರಿಂದಾಗಿಯೇ ಜಿಲ್ಲೆಯಲ್ಲಿ ಹಲವು ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಉಡುಪಿಯಿಂದ ವರ್ಗಾವಣೆಗೊಂಡಿರುವ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕೋವಿಡ್-19 ಅವಧಿಯಲ್ಲಿ, ಕ್ವಾರಂಟೈನ್ ಕೇಂದ್ರಗಳು ಮತ್ತು ಕೋವಿಡ್ ಕೇರ್‌ಸೆಂಟರ್‌ಗಳ ನಿರ್ವಹಣೆಯು ಸವಾಲಿನ ಕೆಲಸವಾಗಿದ್ದು, ಎಲ್ಲಾ ಇಲಾಖೆಗಳ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಲಾಯಿತು. ಸಾರ್ವಜನಿಕರಿಗೆ ಕಂದಾಯ ಸೇವೆಗಳನ್ನು ನೀಡುವಲ್ಲಿ, ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸಿಬ್ಬಂದಿಗಳು ನೀಡಿರುವ ಸಹಕಾರ ಸಹ ಮರೆಯಲಾಗದು ಎಂದ ಸದಾಶಿವ ಪ್ರಭು, ಉಡುಪಿ ಜಿಲ್ಲೆಯ ತಮ್ಮ ಸೇವಾವಧಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ, ತಮ್ಮ ಆಪ್ತ ಸಹಾಯಕ, ವಾಹನ ಚಾಲಕನಿಗೂ ಸಹ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಸದಾ ಹಸನ್ಮುಖಿಯಾಗಿದ್ದ ಸದಾಶಿವ ಪ್ರಭು ಅವರು, ಜಿಲ್ಲೆಯು ಹಲವು ಸಾಧನೆಗಳನ್ನು ಮಾಡುವಲ್ಲಿ ಶ್ರಮ ವಹಿಸಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಉತ್ತಮ ಸಮನ್ವಯತೆ ಹೊಂದಿದ್ದರು. ಜಿಲ್ಲೆಯಲ್ಲಿನ ಆಡಳಿತ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಯಾವುದೇ ಕಾರ್ಯಕ್ಕೂ ತಕ್ಷಣ ಪ್ರತಿಕ್ರಿಯೆ ನೀಡಿ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸದಾಶಿವ ಪ್ರಭು ಅವರು ಸಫಲರಾಗಿದ್ದರು. ತಮಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದು, ಎಲ್ಲರೊಂದಿಗೂ ಬೆರೆತು, ಕಾರ್ಯ ನಿರ್ವಹಿಸುವುದು ಇವರ ಉತ್ತಮ ಗುಣ ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ನೂತನ ಅಪರ ಜಿಲ್ಲಾಧಿಕಾರಿ ವೀಣಾ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಶ್ರೀಮತಿ ಗೀತಾ ಎಸ್ ಪ್ರಭು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ ವಂದಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.