ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂರು ಪ್ರಮುಖ ಆರೋಪಿಗಳ ಬಂಧನ; ಒಟ್ಟು ಬಂಧಿತರ ಸಂಖ್ಯೆ ಹತ್ತಕ್ಕೆ ಏರಿಕೆ

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯು ಒಂದು ಪೂರ್ವ ನಿಯೋಜಿತ ಷಡ್ಯಂತ್ರದ ಭಾಗವೆಂದು ಮುಖ್ಯಮಂತ್ರಿ ಬೊಮ್ಮಾಯಿ ಉಲ್ಲೇಖಿಸುತ್ತಲೇ ಬಂದಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ನಡೆದು ಎರಡು ವಾರಗಳು ಕಳೆದಿದ್ದು, ದಿನಗಳ ಅಂತರದಲ್ಲಿ ಬಂಧನಗಳು ನಡೆಯುತ್ತಲೇ ಇವೆ. ಇದೀಗ ಪ್ರವೀಣ್ ಹತ್ಯೆಗೆ ಸಂಬಂಧಿಸಿ ಸುಳ್ಯದ ಮೂವರು ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಿಯಾಬುದ್ದೀನ್ ಅಲಿ, ರಿಯಾಜ್ ಹಾಗೂ ಎಲಿಮಲೆಯ ಬಶೀರ್ ಬಂಧಿತರು ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಈ ಮೂರು ಆರೋಪಿಗಳು ಪದೇ ಪದೇ ಜಾಗ ಬದಲಾಯಿಸುತ್ತಿದ್ದರು. ಆದರೆ ಹಂತಕರ ಶೋಧನೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದರಿಂದ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರ ತಂಡವು ಗುರುವಾರದಂದು ತಲಪಾಡಿಯ ಬಳಿ ಆರೋಪಿಗಳನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗುವುದು. ಮಹಜರು, ಕೊಲೆಗೆ ಬಳಸಿದ ವಾಹನ ಹಾಗೂ ಆಯುಧಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಪ್ರಕರಣವನ್ನು ಎನ್.ಐ.ಎಗೆ ಹಸ್ತಾಂತರಿಸಲಾಗುವುದು ಎಂದು ಅಲೋಕ್ ತಿಳಿಸಿದ್ದಾರೆ.

ಈ ಮೂವರ ಬಂಧನದೊಂದಿಗೆ ಹತ್ಯೆಯಲ್ಲಿ ಭಾಗಿಯಾದವರನ್ನು ಬಂಧಿಸಿದವರ ಸಂಖ್ಯೆ ಹತ್ತಕ್ಕೆ ಏರಿದೆ. ಬಂಧಿತರಲ್ಲಿ ಬಹುತೇಕರು ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನ ಸದಸ್ಯರು ಎಂದು ವರದಿಗಳು ಹೇಳುತ್ತಿವೆ. ಈ ಪ್ರಕರಣದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದರೆನ್ನುವುದು ತಿಳಿಯಲು ಹಾಗೂ ಕೊಲೆಯ ಸಂಚಿನ ಮಾಹಿತಿ ದೊರಕಲು ಎನ್.ಐ.ಎ ತನಿಖಾ ವರದಿಗಾಗಿ ಕಾಯಬೇಕಾಗಿದೆ.

ಈ ಮಧ್ಯೆ ಪ್ರವೀಣ್ ಹತ್ಯೆಯಾಗಿ 16 ದಿನಗಳೊಳಗೆ 10 ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಪ್ರವೀಣ್ ಕುಟುಂಬದವರು ಪ್ರತಿಕ್ರಿಯಿಸಿ, ಆರೋಪಿಗಳನ್ನು ಬಂಧಿಸಿರುವುದಕ್ಕೆ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಇದರ ಜೊತೆಗೆ ಬೆಳ್ಳಾರೆ ಪೊಲೀಸರು ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಪ್ರವೀಣ್ ಹತ್ಯೆಯಾಗುತ್ತಿರಲಿಲ್ಲ, ಪುತ್ರನ ಸ್ಥಿತಿ ಯಾರಿಗೂ ಬರಬಾರದು ಎಂದು ಹೇಳಿದ್ದಾರೆಂದು ವರದಿಯಾಗಿದೆ.