ಬೆಂಗಳೂರು ಪೊಲೀಸರಿಂದ ಚಂದನ ಚೋರರ ಬಂಧನ: ಒಟ್ಟು 3 ಕೋಟಿ ರೂ. ಮೌಲ್ಯದ ಸೊತ್ತು ವಶ

ಸಾಂದರ್ಭಿಕ ಚಿತ್ರ

ಬೆಂಗಳೂರು: ಎಂಟು ಚಂದನ ಚೋರರನ್ನು ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು, ಒಟ್ಟು 3 ಕೋಟಿ ರೂ. ಮೌಲ್ಯದ 730 ಕೆಜಿ ಶ್ರೀಗಂಧ ಮತ್ತು 170 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಗೋವಿಂದ ಸ್ವಾಮಿ, ಕೆ.ಮಧು ಅಲಿಯಾಸ್ ಮಾದ, ವೆಂಕಟೇಶ್, ವರದರಾಜು, ರಮಾಚಂದ್ರ, ವಸೀಮ್ ಬೇಗ್, ರಾಮಚಂದ್ರಪ್ಪ, ನಂಜೇಗೌಡ ಮುಂತಾದವರ ತಂಡವು ಆಗಸ್ಟ್ 1 ರಂದು ಗಾಲ್ಫ್ ಕ್ಲಬ್ ಆವರಣದಲ್ಲಿರುವ ಶ್ರೀಗಂಧದ ಮರವನ್ನು ಕಡಿದು ಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಹಾಯಕ ಪೊಲೀಸ್ ಆಯುಕ್ತ (ಶೇಷಾದ್ರಿಪುರಂ) ಚಂದನ್ ಕುಮಾರ್ ಎನ್ ಮತ್ತು ಇನ್ಸ್ ಪೆಕ್ಟರ್ ಸಿ ಬಿ ಶಿವಸ್ವಾಮಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್

ಗಾಲ್ಫ್ ಕ್ಲಬ್ ಆವರಣದಿಂದ ಮರವನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಗೋವಿಂದ, ಮಧು, ವೆಂಕಟೇಶ್ ಮತ್ತು ರಾಮಚಂದ್ರ ಎಂಬುವವರನ್ನು ಪೊಲೀಸರು ಆರಂಭದಲ್ಲೇ ಬಂಧಿಸಿದ್ದಾರೆ. ಹಾನಿಗೊಳಗಾದ ಫೆನ್ಸಿಂಗ್ ವಿಭಾಗದ ಮೂಲಕ ಆವರಣವನ್ನು ಪ್ರವೇಶಿಸಿದ್ದೆವು ಎಂದು ಈ ನಾಲ್ವರು ಪೊಲೀಸರಿಗೆ ತಿಳಿಸಿದ್ದಾರೆ.

ತಮ್ಮನ್ನು ಎರಡು ಗುಂಪುಗಳಾಗಿ ವಿಭಜಿಸಿಕೊಂಡು, ಮರಗಳನ್ನು ಹುಡುಕುವ ಕೆಲಸವನ್ನು ರಾಮಚಂದ್ರನಿಗೆ ವಹಿಸಿ ಉಳಿದ ಮೂವರು ಸಂಜೆ ಸ್ಥಳಕ್ಕೆ ತಲುಪಿ ಮಧ್ಯರಾತ್ರಿಯವರೆಗೆ ಅಲ್ಲೇ ಮೊಕ್ಕಾಂ ಹೂಡುತ್ತಾರೆ. ನಂತರ ಮೂವರೂ ಮರಕ್ಕೆ ಕೊಡಲಿ ಬೀಸಿ, ಸಣ್ಣ ತುಂಡುಗಳಾಗಿ ಕತ್ತರಿಸಿ ಗಾಡಿಯಲ್ಲಿ ಸಾಗಿಸುತ್ತಾರೆ.

ಕೇವಲ ಐದು ನಿಮಿಷಗಳಲ್ಲಿ ಯಾಂತ್ರಿಕ ಉಪಕರಣಗಳನ್ನು ಬಳಸಿ ಚಂದನ ಮರವನ್ನು ಕತ್ತರಿಸುತ್ತಾರೆ. ತೇವಾಂಶವು ಶಬ್ದವನ್ನು ಕಡಿಮೆ ಮಾಡುವುದರಿಂದ ಮಳೆಯ ಸಮಯದಲ್ಲಿ ಅಥವಾ ಅದರ ಸ್ವಲ್ಪ ಸಮಯದ ನಂತರ ಈ ಗುಂಪು ಮರಗಳನ್ನು ಕತ್ತರಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಕತ್ತರಿಸಿದ ಮರದ ತುಂಡುಗಳನ್ನು ಖರೀದಿದಾರರಾದ ಬೇಗ್, ರಿಯಾಜ್, ನಯಾಜ್, ಅಲ್ತಾಫ್, ಬಶೀರ್, ರಾಮಚಂದ್ರಪ್ಪ ಮತ್ತು ವರದರಾಜು ಇವರಿಗೆ ನೀಡಲಾಗುತ್ತಿತ್ತು ಎಂದು ಬಂಧಿತರು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಖರೀದಿದಾರರು ಶ್ರೀಗಂಧವನ್ನು ಆಂಧ್ರಪ್ರದೇಶದ ಮಡಕಶಿರಾ ಬಳಿಯ ನಿಶಾತ್ ಫ್ರಾಗ್ರೆನ್ಸ್‌ಗೆ ಮರು ಮಾರಾಟ ಮಾಡುತ್ತಿದ್ದರು.ಕಂಪನಿ ಆವರಣದ ಮೇಲೆ ದಾಳಿ ನಡೆಸಿದ ಪೊಲೀಸರು 620 ಕಿಲೋಗ್ರಾಂ ಶ್ರೀಗಂಧ, 147 ಕಿಲೋ ಶ್ರೀಗಂಧದ ಎಣ್ಣೆ, ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಖಾನೆ ನಿರ್ವಹಿಸುತ್ತಿದ್ದ ನಂಜೇಗೌಡನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.