ಭಾರತೀಯ ಚಿತ್ರರಂಗದ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ 10 ಅಕ್ಟೋಬರ್ 1973 ರಲ್ಲಿ ಜನಿಸಿದರು. ಇವರು ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ. ಅವರ ಮೂರು ಚಲನಚಿತ್ರಗಳು, ಬಾಹುಬಲಿ: ದಿ ಬಿಗಿನಿಂಗ್ (2015), ಬಾಹುಬಲಿ 2: ದಿ ಕನ್‌ಕ್ಲೂಷನ್ (2017), ಮತ್ತು ಆರ್.ಆರ್.ಆರ್ (2022) ಇಲ್ಲಿಯವರೆಗೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಸೇರಿವೆ.
ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ದಕ್ಷಿಣ ಭಾರತೀಯ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಐದು ನಂದಿ ಪ್ರಶಸ್ತಿಗಳು ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016 ರಲ್ಲಿ, ಭಾರತ ಸರ್ಕಾರವು ಅವರಿಗೆ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇಂದಿನ ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ಬಳಿಯ ಅಮರೇಶ್ವರ ಶಿಬಿರದಲ್ಲಿ ನೆಲೆಸಿದ್ದ ವಿ. ವಿಜಯೇಂದ್ರ ಪ್ರಸಾದ್ ಮತ್ತು ರಾಜನಂದಿನಿ ಎನ್ನುವ ಅನನ್ಯ ಶಿವಭಕ್ತ ದಂಪತಿಗಳ ಪುತ್ರ ಇವರು. ರಾಜಮೌಳಿ ಅವರ ತಾಯಿ ಶ್ರೀಶೈಲ ಯಾತ್ರಾಸ್ಥಳಕ್ಕೆ ಭೇಟಿ ನೀಡಿದಾಗ ಕನಸೊಂದನ್ನು ಕಂಡ ನಂತರ ರಾಜಮೌಳಿ ಜನಿಸಿದರು. ಹಾಗಾಗಿ ಅವರಿಗೆ ಶ್ರೀಶೈಲ ಶ್ರೀ ರಾಜಮೌಳಿ ಎಂದು ಹೆಸರಿಡಲಾಯಿತು ಎನ್ನಲಾಗುತ್ತದೆ. ಇವರಿಗೆ ಒಬ್ಬ ಸಹೋದರಿ ಇದ್ದಾಳೆ.
ರಾಜಮೌಳಿ ಅವರ ಕುಟುಂಬ ಆಂಧ್ರಪ್ರದೇಶದ ರಾಜಮಂಡ್ರಿ ಬಳಿಯ ಕೊವ್ವೂರು ಮೂಲದವರು. ಅವರ ತಾಯಿಯ ಕುಟುಂಬವು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿದೆ ಮತ್ತು ರಾಜಮೌಳಿ ಹಲವಾರು ವರ್ಷ ಅಲ್ಲಿ ವಾಸಿಸಿದ್ದರು. ಪ್ರಸಾದ್ ಅವರ ಕುಟುಂಬವು ಕೊವ್ವೂರಿನಲ್ಲಿ ಜಮೀನುಗಳನ್ನು ಹೊಂದಿದ್ದು, ರೈಲ್ವೆ ಮಾರ್ಗಗಳಿಂದಾಗಿ ಜಮೀನನ್ನು ಕಳೆದುಕೊಂಡಾಗ ಪ್ರಸಾದ್ ಮತ್ತು ಅವರ ಕುಟುಂಬ 1968 ರಲ್ಲಿ ಕೊವ್ವೂರಿನಿಂದ ಕರ್ನಾಟಕಕ್ಕೆ ಬಂದಿಳಿಯಿತು. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಿರೇಕೋಟಿಕಲ್ ಗ್ರಾಮದಲ್ಲಿ ತಮ್ಮ ಅಣ್ಣ ಕೆ.ವಿ.ಶಿವಶಂಕರ್ ಜತೆ ಸೇರಿ ಏಳು ಎಕರೆ ಗದ್ದೆ ಖರೀದಿಸಿದ್ದ ಅವರ ಕುಟುಂಬವು 1977 ರಲ್ಲಿ ಕೊವ್ವೂರಿಗೆ ಮರಳಿತು.
ರಾಜಮೌಳಿ ಚಿಕ್ಕಂದಿನಿಂದಲೂ ರಾಮಾಯಣ, ಮಹಾಭಾರತ, ಭಾಗವತ ಮತ್ತು ಅಮರ ಚಿತ್ರಕಥಾ ಮುಂತಾದ ಪೌರಾಣಿಕ ಮಾಹಾಕಾವ್ಯಗಳನ್ನು ಓದುತ್ತಲೇ ಬಂದವರು. ಎಳವೆಯಲ್ಲೇ ಕಥಾನಿರೂಪಣೆಯಲ್ಲಿ ಎತ್ತಿದ ಕೈಯಾಗಿದ್ದ ರಾಜಮೌಳಿ ಇಂದು ವಿಶ್ವಮಾನ್ಯ ನಿರ್ದೇಶಕನಾಗುವುದರ ಹಿಂದೆ ಈ ಪೌರಾಣಿಕ ಕಥಾನಕಗಳ ಪಾತ್ರ ಬಹಳಷ್ಟಿದೆ ಎನ್ನಲಾಗುತ್ತದೆ. ತಮ್ಮ ಬೆಲೆಬಾಳುವ ಜಮೀನುಗಳನ್ನೆಲ್ಲಾ ಸಿನಿಮಾ ನಿರ್ಮಾಣಕ್ಕಾಗಿ ಕಳೆದುಕೊಂಡ ರಾಜಮೌಳಿ ಪರಿವಾರ ಅಂದಿನ ಮದ್ರಾಸ್ ಗೆ ಸ್ಥಳಾಂತರಗೊಳ್ಳುತ್ತದೆ.
ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕೂಡಾ ಹೆಸರಾಂತ ಚಿತ್ರಕಥೆಗಾರ. ತಮ್ಮ ಸಿನಿಮಾ ಪ್ರೀತಿಯಿಂದಾಗಿ ಈ ಪರಿವಾರ ತಮ್ಮದೆನ್ನುವ ಎಲ್ಲವನ್ನೂ ಕಳೆದುಕೊಂಡು ಕಷ್ಟದ ಪರಿಸ್ಥಿತಿಗಳನ್ನೆದುರಿಸಿದ್ದರೂ, ಛಲ ಬಿಡದ ವಿಕ್ರಮನಂತೆ ಶೃದ್ಧೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿ ಇಂದು ಬಾಹುಬಲಿ, ಆರ್.ಆರ್.ಆರ್ ನಂತಹ ವಿಶ್ವಮಾನ್ಯ ಚಲನಚಿತ್ರಗಳನ್ನು ನೀಡಿ ದೇಶವೆ ಹೆಮ್ಮೆ ಪಡುವಂತೆ ಮಾಡಿದೆ. ದೇಶಕ್ಕೆ ಕೀರ್ತಿ ತಂದ ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಜನ್ಮದಿನದಂದು ಅವರಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.