ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ನೀವಿದನ್ನು ಮಾಡಲೇಬೇಕು: ಇಲ್ಲಿದೆ ಡಾ. ಹರ್ಷಾ ಕಾಮತ್ ಸಲಹೆ

ಚಳಿಗಾಲದಲ್ಲಿ ಪಾಲಿಸಬೇಕಾದ ಹಲವು ನಿಯಮಗಳು ಆಯುರ್ವೇದದಲ್ಲಿದೆ . ಇದನ್ನೇ ಋತುಚರ್ಯವೆಂದು ಕರೆಯುತ್ತಾರೆ. ನಾವು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಚಳಿಗಾಲದಲ್ಲಿ ಆರೋಗ್ಯದಿಂದಿರಲು ಸಾಧ್ಯ.ಕಾರ್ಕಳದ ಡಾ.ಹರ್ಷಾ ಕಾಮತ್ ಅವರು ಚಳಿಗಾಲದಲ್ಲಿ ಆರೋಗ್ಯವನ್ನು ಹೇಗಿಟ್ಟುಕೊಳ್ಳಬೇಕು? ಎನ್ನುವ ಕುರಿತು ಒಂದಷ್ಟು  ಸಲಹೆ ನೀಡಿದ್ದಾರೆ. ಅವರ ಸಲಹೆ ಪ್ರಕಾರ ನಡೆದರೆ ನಿಮಗೇ ಲಾಭ. ಇಲ್ಲದಿದ್ದರೆ ನಿಮ್ಮ ಆರೋಗ್ಯಕ್ಕೆ ಲಾಸ್.

ಚಳಿಗಾಲದಲ್ಲಿ ವಾತಾವರಣವು ಬಹಳ ತಂಪಾಗಿ ಶುಷ್ಕ ಹವೆಯಿಂದ ಕೂಡಿರುತ್ತದೆ.ಇದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗಿ ಸಂದುನೋವು  ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಳಿಗಾಳಿಯಿಂದಾಗಿ ನೆಗಡಿ, ಕೆಮ್ಮು ಮುಂತಾದ ಕಫ ಕಟ್ಟುವ ಸಾಧ್ಯತೆಗಳೂ ಅಧಿಕ. ಹಾಗಾಗಿ ಈ ಋತುವಿನಲ್ಲಿ ತ್ವಚೆಯ ರಕ್ಷಣೆ ಬಹಳ ಅಗತ್ಯ. ಆದರೂ ಚಳಿಗಾಲದಲ್ಲಿ ಕೆಲವು ಒಳ್ಳೆಯ ಪರಿಣಾಮಗಳೂ ಇವೆ.  ದೇಹಬಲ ಹಾಗೂ ಜೀರ್ಣಶಕ್ತಿ ಈ ಸಮಯದಲ್ಲಿ ಎಲ್ಲ ಋತುಗಳಿಗಿಂತ ಅಧಿಕವಾಗಿರುತ್ತದೆ.

ಇದನ್ನೆಲ್ಲಾ  ತಿನ್ನಿ:

  • ಜಿಡ್ಡಿನ ಪದಾರ್ಥಗಳು, ಸಿಹಿ ಪದಾರ್ಥಗಳು, ಹುಳಿ ಮತ್ತು ಲವಣವಿರುವ ಆಹಾರ ಸೇವನೆ ಅಗತ್ಯ.
  • ಅಕ್ಕಿ, ಗೋಧಿ, ಬಾರ್ಲಿ, ಬೆಲ್ಲ, ಕಬ್ಬು, ಹಾಲು, ತುಪ್ಪ, ಪನೀರ್ , ಬೆಣ್ಣೆ, ಉದ್ದಿನ ಬೇಳೆಯಿಂದ ಮಾಡಿದ ದೋಸೆ ಇಡ್ಲಿ, ಬಟಾಟೆ, ಗೆಣಸು, ಕ್ಯಾರೆಟ್, ಬೀಟ್ರೂಟ್, ಕುಂಬಳಕಾಯಿ, ಬಿಸಿನೀರು, ಜಿಂಜರ್ ಟೀ, ದ್ರಾಕ್ಷಿ ಮತ್ತು ಖರ್ಜೂರದ ಸೇವನೆ ಮಾಡಬಹುದು.

ತ್ವಚೆಯ ರಕ್ಷಣೆಗಾಗಿ ಹೀಗ್ ಮಾಡಿ:

  • ಎಳ್ಳೆಣ್ಣೆಯಿಂದ ದೇಹ ಅಭ್ಯಂಜನ ಹಾಗೂ ಬಿಸಿ ನೀರಿನ ಸ್ನಾನ ಒಳ್ಳೆಯದು. ಬೆಳಿಗ್ಗೆ ಹಾಗೂ ಸಾಯಂಕಾಲ ಬಿಸಿಲಿಗೆ ಮೈಯೊಡ್ಡಿದರೆ ತ್ವಚೆಗೆ ಹಿತ .
  • ಪ್ರತಿ ನಿತ್ಯ ಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ . ಸಿಲ್ಕ್, ಉಣ್ಣೆ ಮತ್ತು ಹತ್ತಿ ಬಟ್ಟೆ ಧರಿಸುವುದರಿಂದ ದೇಹವನ್ನು ಚಳಿಯಿಂದ ಕಾಪಾಡಬಹುದು .

ನಿಮ್ಮ ಮುಖ ಕಾಂತಿ ಹೆಚ್ಚಾಗಲಿ:   ಹಾಲಿನ ಕೆನೆ ಹಚ್ಚಿ ಒಣಗಿದ ನಂತರ ನೀರಿನಲ್ಲಿ ತೊಳೆಯಿರಿ. ಸಾಬೂನು ಬಳಸುವುದು ಆದಷ್ಟು ಕಡಿಮೆ ಮಾಡಿ, ಅದರ ಬದಲು ಕಡಲೆ ಹಿಟ್ಟಿಗೆ ಸ್ವಲ್ಪ ಹಾಲು ಹಾಕಿ ಕಲಸಿ ಬಳಸಿ ನೋಡಿ. ಅಲೋವೆರಾ ಜೆಲ್ ಕೂಡ ಬಳಸಬಹುದು.

ಕೊಂಚ ಗಮನವಿಟ್ಟು ಕೇಳಿ:

  • ಶುಷ್ಕ ಆಹಾರ ಮತ್ತು ತುಂಬಾ ಮಸಾಲೆ ಇರುವ ಆಹಾರವನ್ನು ಸೇವಿಸಬಾರದು. ಜೀರ್ಣಕ್ರಿಯೆಯ ಮೇಲೆ ಗಮನವಿಡುವುದು ಒಳ್ಳೆಯದು. ಬಿಸಿ ನೀರನ್ನು ಕುಡಿದರೆ ಮತ್ತೂ ಒಳ್ಳೆಯದು.
  • ಹಗಲು ಹೊತ್ತಿನಲ್ಲಿ ನಿದ್ರೆ ಮಾಡಲು ಹೋಗಬೇಡಿ.
  • ಈ ಋತುವಿನಲ್ಲಿ ಕೆಮ್ಮು, ನೆಗಡಿ ,ಬ್ರಾಂಕೈಟಿಸ್,ನಿಮೋನಿಯಾ, ಗಂಟಲು ಕೆರೆತ ಕಾಡುವುದು ಸಾಮಾನ್ಯ ಇದನ್ನು ತಡೆಗಟ್ಟಲು, ನೀರನ್ನು ಬಿಸಿ ಮಾಡಿ ಕುಡಿಯಿರಿ.
  • ತಿಂಡಿ ತಿನ್ನುವ ಮೊದಲು ಕೈ ಕಾಲನ್ನು ಸರಿಯಾಗಿ ತೊಳೆದು ಆಹಾರ ಸೇವಿಸಿ. ಆರೋಗ್ಯಕರ ಆಹಾರವನ್ನು ಸೇವಿಸಿ.
  • ಸ್ವಚ್ಛ ಬಟ್ಟೆಯನ್ನು ಧರಿಸಿರಿ. ತುಲಸಿ, ಅರಿಷಿಣ, ಕರಿಮೆಣಸು, ಬೆಲ್ಲ ಹಾಕಿ ತಯಾರಿಸಿದ ಕಷಾಯವನ್ನು ಸೇವಿಸಿ. ಆರೋಗ್ಯಪೂರ್ಣ ಜೀವನವನ್ನು ಅನುಭವಿಸಿ.

ಡಾ.ಹರ್ಷಾ ಕಾಮತ್