ಉಡುಪಿ: ಉಡುಪಿ ಕೃಷ್ಣಮಠಕ್ಕೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಕೊಟ್ಟು ಕೃಷ್ಣನ ದರ್ಶನ ಮಾಡಿದರು. ಬಳಿಕ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ಶ್ರೀಪಾದರನ್ನು ಭೇಟಿ ಮಾಡಿ ಕೆಲಕಾಲ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ರಕ್ಷಣಾ ಸಚಿವರ ಬಳಿ ಉಡುಪಿಗೆ ಅಭಿನಂದನ್ ವರ್ಧಮಾನ್ ರನ್ನು ಕಳುಹಿಸಿಕೊಡಿ ಎಂದು ಶ್ರೀಪಾದರು ವಿನಂತಿಸಿಕೊಂಡರು.
ಅಭಿನಂದನ್ ನನ್ನು ಉಡುಪಿಗೆ ಕಳುಹಿಸಿಕೊಡಿ, ವಿಂಗ್ ಕಮಾಂಡರ್ ಅಭಿನಂದನ್ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಪಾಕಿಸ್ತಾನದ ನೆಲದಲ್ಲೂ ಎದೆಗುಂದದೆ ದೇಶದ ಗೌರವ ಕಾಪಾಡಿದ್ದಾರೆ. ಅಭಿನಂದನ್ ದಿಟ್ಟತನವನ್ನು ವಿಶ್ವವೇ ಕೊಂಡಾಡಿದೆ. ಕೃಷ್ಣಮಠದಲ್ಲಿ ಅಭಿನಂದನ್ ಗೆ ಗೌರವಾರ್ಪಣೆ ಮಾಡಬೇಕು ಎಂಬ ಇಚ್ಛೆಯಿದೆ ಎಂದರು.
ಕೃಷ್ಣ ಮಠಕ್ಕ ಚಿನ್ನದ ಮಹಡಿಯ ನಿರ್ಮಾಣ ಆಗುತ್ತಿದೆ. ಬ್ರಹ್ಮಕಲಶೋತ್ಸವ ಸಂದರ್ಭ ಅಭಿನಂದನ್ ಗೆ ಮಠದ ಗೌರವ ಕೊಡುವ ಆಕಾಂಕ್ಷೆಯಿದೆ ಎಂದು ಸ್ವಾಮೀಜಿ ಹೇಳಿದರು.
ನಿಮ್ಮ ಕಾಲಾವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮಹತ್ವದ್ದು. ಉಗ್ರರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುವ ಅಗತ್ಯ ಇದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಇಲಾಖೆಗೆ ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಈ ಬಗ್ಗೆ ಒಂದು ಪತ್ರ ಬರೆಯಿರಿ ಎಂದರು.
ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿಯಿದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯ್ಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ ಎಂದು ರಕ್ಷಣಾ ಸಚಿವರು ವಿನಂತಿಸಿದರು. ಗುರುಗಳ ಬಳಿ ರಾಜಕೀಯ ಮಾತನಾಡಬಾರದು. ಆದ್ರೂ ಮತ್ತೆ ಬಿಜೆಪಿ ಸರಕಾರ ರಚನೆಯಾಗುವಂತೆ ಆಶೀರ್ವದಿಸಿ ಎಂದು ಪರ್ಯಾಯ ವಿದ್ಯಾಧೀಶ ಸ್ವಾಮೀಜಿಯಲ್ಲಿ ಸಚಿವೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮೊದಲಾದವರು ಇದ್ದರು.