ಅಪಪ್ರಚಾರ, ಷಡ್ಯಂತ್ರ ಮಾಡಿದವರಿಗೆ ಸರಿಯಾದ ಶಿಕ್ಷೆ ಕೊಡುತ್ತೇನೆ: ಕಲ್ಕುಡ ದೈವದ ಎಚ್ಚರಿಕೆ

ಕಟಪಾಡಿ: ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅವರ ವಿರುದ್ಧ ಆರ್ ಟಿಐ ಕಾರ್ಯಕರ್ತ ಶಂಕರ ಶಾಂತಿ ಮಾಡಿರುವ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿ ಶನಿವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕಲ್ಕುಡ ದೈವ ನುಡಿಕೊಟ್ಟಿದ್ದು, ಕ್ಷೇತ್ರಾಡಳಿತ ಮಂಡಳಿ ಮತ್ತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡುವ ವ್ಯಕ್ತಿಗಳನ್ನು ನಾನು ನೋಡಿಕೊಳ್ಳುತ್ತೇನೆ.

ಅಂತಹವರಿಗೆ ಅವರವರ ಯೋಗ್ಯತೆ ಮತ್ತು ಕರ್ಮಕ್ಕೆ ಅನುಗುಣವಾದ ಶಿಕ್ಷೆಯನ್ನು ನಾನು ನೀಡುತ್ತೇನೆ ಎಂದು ದೈವ ಹೇಳಿದೆ. ತನ್ನ ವಿರುದ್ಧ ಅಪಪ್ರಚಾರ, ಷಡ್ಯಂತರ ಎಸಗಿದವರ ವಿರುದ್ಧ ಶಂಕರ ಪೂಜಾರಿ ದೈವಕ್ಕೆ ದೂರು ನೀಡಿದ್ದರು.

ಅದರಂತೆ ದೈವ ಶಂಕರ ಪೂಜಾರಿ ಅವರಿಗೆ ಅಭಯ ನೀಡಿದ್ದು, ಈ ಬಗ್ಗೆ ಯಾರೂ ಭಯಭೀತರಾಗುವುದು ಬೇಡ. ಕ್ಷೇತ್ರದಲ್ಲಿ ನಾನು ಇರುವುದು ಹೌದಾದರೆ ನಿಮ್ಮ‌ ವಿರುದ್ಧ ಷಡ್ಯಂತ್ರ ಹೂಡುವ ವ್ಯಕ್ತಿಗಳನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನಿಶ್ಚಿಂತರಾಗಿರಿ ಎಂಬ ಅಭಯ ವಾಕ್ಯದೊಂದಿಗೆ ಪ್ರಸಾದ ನೀಡಿ, ಧೈರ್ಯದ ನುಡಿಗಳನ್ನು ನೀಡಿದೆ.