ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸಲು ಮೋಸದ ತಂತ್ರ ಅನುಸರಿಸಿದಲ್ಲಿ ಹೋರಾಟ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ 5 ಉಚಿತಗಳ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ ಎಂದು ಪುಂಗಿ ಊದಿದ್ದ ಕಾಂಗ್ರೆಸ್ ಮುಖಂಡರು ಇದೀಗ ಉಲ್ಟಾ ಹೊಡೆದು ಜನತೆಗೆ ನೀಡಿದ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವುದು ಹಾಸ್ಯಾಸ್ಪದ. ಜನರ ತೆರಿಗೆ ಹಣದಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿ ಘೋಷಿಸಿ, ಅಧಿಕಾರಕ್ಕೆ ಬಂದು, ಮಾತೆತ್ತಿದರೆ ಉಡಾಫೆ ಉತ್ತರ ನೀಡುವ ಕಾಂಗ್ರೆಸಿಗರಿಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹರಿಹಾಯ್ದಿದ್ದಾರೆ.

ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಗರಿಷ್ಠ ಭರವಸೆಗಳನ್ನು ಈಡೇರಿಸುವ ಜೊತೆಗೆ ಹಲವಾರು ಜನಪ್ರಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಹೀನಾಯ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ಸಿನಿಂದ ಬಿಜೆಪಿಗೆ ನೈತಿಕತೆಯ ಪಾಠ ಅನಗತ್ಯ.

‘ವಿದೇಶಿ ಬ್ಯಾಂಕ್ ಗಳಲ್ಲಿ ಈ ಕಳ್ಳರು, ಲೂಟಿಕೋರರು ಜಮಾ ಮಾಡಿರುವ ಹಣವನ್ನು ತಂದರೆ, ಭಾರತದ ಒಂದೊಂದು ಬಡವರಿಗೂ ಹದಿನೈದು ಇಪ್ಪತ್ತು ಲಕ್ಷದಂತೆ ವಿತರಿಸುವಷ್ಟು ಹಣವಿದೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ತಿರುಚಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಆಡಿರುವ ಬಾಲಿಶ ಮಾತುಗಳು ಅರ್ಥಹೀನವಾಗಿದೆ.

ಪ್ರಧಾನಿ ಮೋದಿಯವರು ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ರೀತಿಯಲ್ಲಿ ಯಾರ ಖಾತೆಗೂ ಹಣ ಜಮಾ ಮಾಡುವ ಭರವಸೆಯನ್ನು ನೀಡಿಲ್ಲ. ಬದಲಾಗಿ ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ಉತ್ತಮ ಆಡಳಿತ ಹಾಗೂ ಸದೃಢ ಭಾರತದ ಪರಿಕಲ್ಪನೆಯೊಂದಿಗೆ ವಿಶ್ವ ಮಟ್ಟದಲ್ಲಿ ಭಾರತದ ಘನತೆ ಗೌರವ ಹೆಚ್ಚುವಂತೆ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಉಚಿತ ಖಚಿತ ಖಂಡಿತಗಳ ಗ್ಯಾರಂಟಿ ಕಾರ್ಡ್ ಗಳನ್ನು ಆರ್ಥಿಕ ಸಂಪನ್ಮೂಲದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಜಾರಿಗೆ ತರಲು ಪರದಾಡುತ್ತಿರುವ ಸ್ಥಿತಿಯಲ್ಲಿ ಹೊಸ ಷರತ್ತುಗಳನ್ನು ವಿಧಿಸುವ ಯೋಚನೆಯಲ್ಲಿದ್ದು, ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ವಿಭಿನ್ನ, ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ. ಈ ಎಲ್ಲಾ ವಿಚಾರಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ.

ಜನರ ತೆರಿಗೆ ಹಣದಿಂದ ಜಾರಿಗೊಳಿಸಲು ಘೋಷಿಸಿರುವ ಕಾಂಗ್ರೆಸ್ಸಿನ ಉಚಿತ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಒತ್ತಾಯಿಸಲು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ಜಾರಿಯಲ್ಲಿ ವಿಳಂಬ ಧೋರಣೆ ಅಥವಾ ಮೋಸದ ತಂತ್ರ ಅನುಸರಿಸಿದಲ್ಲಿ ಬಿಜೆಪಿ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜನಪರ ಹೋರಾಟಕ್ಕೆ ಸದಾ ಸಿದ್ಧವಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.