ಮೂವರು ಉಪಮುಖ್ಯಮಂತ್ರಿಗಳ ನೇಮಕ ಊಹಾಪೋಹ: ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಮೂವರು ಉಪಮುಖ್ಯಮಂತ್ರಿಗಳ ನೇಮಕಕ್ಕೆ ಸಂಪುಟದ ಒಳಗಿನಿಂದ ಧ್ವನಿ ಎತ್ತುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರದಂದು ಹೈಕಮಾಂಡ್ ಈ ಬಗ್ಗೆ ಅಂತಿಮವಾಗಿ ನಿರ್ಧರಿಸುತ್ತದೆ ಮತ್ತು ನಿರ್ಧಾರವನ್ನು ಪಾಲಿಸುವುದಾಗಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಇನ್ನೂ ಮೂರು ಡಿಸಿಎಂಗಳನ್ನು ಹೊಂದುವ ಆಲೋಚನೆಯನ್ನು ಸಹಕಾರ ಸಚಿವ ಕೆ ಎನ್ ರಾಜಣ್ಣ ಶನಿವಾರ ತೇಲಿಬಿಟ್ಟಿದ್ದರು ಮತ್ತು 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಹೇಳಿದ್ದರು.

ಇದು ಸಚಿವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇದನ್ನು ಪಕ್ಷದ ನಾಯಕತ್ವದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ತನಗೆ ಹೇಳಲು ಏನೂ ಇಲ್ಲ ಮತ್ತು ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಮೂರು ಸ್ಥಾನಗಳನ್ನು ನೀಡಬೇಕೆಂದು ರಾಜಣ್ಣ ಒತ್ತಾಯಿಸಿದ್ದಾರೆ. ಸದ್ಯ ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿಯಾಗಿದ್ದಾರೆ. ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿ ಎಂದು ಸಚಿವ ಸಂಪುಟ ರಚನೆ ವೇಳೆ ಕಾಂಗ್ರೆಸ್‌ ನಿರ್ಧಾರ ಕೈಗೊಂಡಿದ್ದರೂ ಮೂವರು ಡಿಸಿಎಂ ಹುದ್ದೆಗೆ ರಾಜಣ್ಣ ವಕಾಲತ್ತು ವಹಿಸುತ್ತಿದ್ದಾರೆ.