ಕಡಬ: ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಾಡಾನೆ ದಾಳಿ; ಪ್ರಯಾಣಿಕರು ಅಪಾಯದಿಂದ ಪಾರು

ಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಆಣಿಲ ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಯೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದಾಳಿ ಮಾಡಿ ವಾಹನಕ್ಕೆ ಹಾನಿ ಮಾಡಿರುವ ಘಟನೆ ವರದಿಯಾಗಿದೆ.

ಮಾಹಿತಿಗಳ ಪ್ರಕಾರ ಘಟನೆ ಜೂನ್ 1 ರಂದು ತಡರಾತ್ರಿ ನಡೆದಿದೆ.

ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಪುತ್ತೂರು, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು ಎನ್ನಲಾಗಿದೆ. ಆಣಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡ ಬಸ್ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ಆನೆ ಬಸ್ಸಿನ ಎಡಭಾಗಕ್ಕೆ ಗುದ್ದಿ ಹಾನಿ ಮಾಡಿದೆ.

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.