“ದೃಶ್ಯಂ” ಸಿನಿಮಾ ಮಾದರಿಯಲ್ಲಿ ಪತಿಯನ್ನು ಕೊಂದು ಮನೆಯಲ್ಲೇ ಹೂತು ಹಾಕಿದ ಪತ್ನಿ.!

ಮುಂಬೈ: ಪ್ರಿಯಕರನ ಸಹಾಯದಿಂದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು ಮನೆಯೊಳಗೆ ಗುಂಡಿ ತೋಡಿ ಹೂತು ಹಾಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಲಸೋಪರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ವಿಜಯ್‌ ಚವಾಣ್‌(40) . ಆತನ ಪತ್ನಿ ಚಮನ್‌ ಚವಾಣ್‌ ಮತ್ತು ಪ್ರಿಯಕರ ಮೋನು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರ ಹೇಳಿಕೆ ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಟೈಲ್ಸ್ ಒಳಗೆ ಮೃತ ದೇಹ ಪತ್ತೆ:
ಕಳೆದ 15 ದಿನಗಳಿಂದ ವಿಜಯ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಅವರ ಸಹೋದರ, ಸೋಮವಾರ ಬೆಳಿಗ್ಗೆ ನೇರವಾಗಿ ಮನೆಗೆ ಭೇಟಿ ನೀಡಿದ್ದಾನೆ. ಈ ವೇಳೆ ಅಣ್ಣ ಮನೆಯಲ್ಲಿ ಇರದದ್ದನ್ನು ಕಂಡು ಅತ್ತಿಗೆ ಚಮನ್‌ ಬಳಿ ವಿಚಾರಿಸಿದ್ದಾರೆ. ದೂರದ ಊರಿಗೆ ಕೆಲಸಕ್ಕೆ ಹೋಗಿದ್ದಾರೆ ಎಂದು ಆಕೆ ಉತ್ತರಿಸಿದ್ದಾಳೆ.

ಅತ್ತಿಗೆ ಉತ್ತರದಿಂದ ಅನುಮಾನಗೊಂಡ ಸಹೋದರ, ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾನೆ. ಮನೆಯಲ್ಲಿ ಒಂದು ಮೂಲೆಯಲ್ಲಿ ಹೊಸದಾಗಿ ಟೈಲ್ಸ್‌ ಹಾಕಿರುವುದು ಆತನ ಅನುಮಾನಕ್ಕೆ ಪುಷ್ಟಿ ನೀಡಿತ್ತು,‌ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸಹೋದರ, ಪೊಲೀಸರೊಂದಿಗೆ ಮನೆಗೆ ಬಂದಿದ್ದಾನೆ. ಈ ವೇಳೆಗಾಗಲೇ ಆರೋಪಿ ಚಮನ್‌ ತನ್ನ ಏಳು ವರ್ಷದ ಮಗನನ್ನು ಕರೆದುಕೊಂಡು ಮನೆ ತೊರೆದಿದ್ದಳು. ಆಕೆ ಮನೆ ಬಿಟ್ಟು ಪರಾರಿಯಾಗುತ್ತಿರುವುದು ದೃಶ್ಯ ಸಿಸಿಟಿವಿ ಸೆರೆಯಾಗಿದೆ.

ಮನೆಯ ಬೀಗ ಒಡೆದು ಟೈಲ್ಸ್‌ ಇದ್ದ ಜಾಗವನ್ನು ಅಗೆದ ಪೊಲೀಸರಿಗೆ, ಸುಮಾರು ಆರು ಅಡಿ ಆಳದಲ್ಲಿ ಕಪ್ಪು ಪ್ಲಾಸ್ಟಿಕ್‌ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಸಿಕ್ಕಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ ಹುಡಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.