ಉಡುಪಿ: ರಾಮಮಂದಿರಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಹಗರಣಗಳ ಆರೋಪಗಳ ಬಗ್ಗೆ ಪೇಜಾವರ ಶ್ರೀಗಳು ಮೌನ ವಹಿಸಿರುವುದು ಏಕೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಮ, ಕ್ರೋಧ, ಲೋಭ, ಮೋಹ ತ್ಯಜಿಸಿರುವ ಪೇಜಾವರ ಶ್ರೀಗಳು ರಾಮಮಂದಿರ ಹಗರಣದ ಬಗ್ಗೆ ಯಾಕೆ ಬಾಯಿಬಿಡುತ್ತಿಲ್ಲ? ಈ ಪ್ರಕರಣದಲ್ಲಿ ನಿಮ್ಮ ಪಾತ್ರವೂ ಇದೆಯೇ?” ಎಂದು ಪ್ರಶ್ನಿಸಿದರು.
ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಆರೋಪಿಸಿದ ಉಗ್ರಪ್ಪ, “ಮರ್ಯಾದಾ ಪುರುಷೋತ್ತಮನ ದೇವಸ್ಥಾನವನ್ನೇ ಲೂಟಿ ಮಾಡಿದವರು ದೇಶವನ್ನೂ ಲೂಟಿ ಮಾಡದೇ ಬಿಡುತ್ತಾರೆಯೇ?” ಎಂದು ಟೀಕಿಸಿದರು.
ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ದೇಶವನ್ನು ಲೂಟಿ ಮಾಡುತ್ತಿರುವ ಸಂಘಟನೆಗಳಾಗಿವೆ ಎಂದು ಆರೋಪಿಸಿದ ಅವರು, ಪೇಜಾವರ ಶ್ರೀಗಳಿಗೆ ನೈತಿಕತೆ ಇದ್ದರೆ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, “ರಾಮನ ಮೇಲೆ ಗೌರವವಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.















