ಕರಾವಳಿಯಲ್ಲಿ ಬಿಸಿಗಾಳಿ ಮುಂದಿನ ಎರಡು-ಮೂರು ದಿನಗಳಲ್ಲಿ ಜಾಸ್ತಿಯಾಗಲಿದೆ ಎನ್ನುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೆಚ್ಚಾಗಿ ಮಧ್ಯಾಹ್ನದ ಹೊತ್ತು ಹೊರಗೆ ಕೆಲಸ ಮಾಡದಂತೆ ಸೂಚನೆ ನೀಡಿದೆ. ಇಂತಹ ಬಿರುಬೇಸಿಗೆಯಲ್ಲಿಯೇ ನಿರ್ಜಲೀಕರಣದ ಸಮಸ್ಯೆ ನಮ್ಮಲ್ಲಿ ಜಾಸ್ತಿಯಾಗುತ್ತದೆ. ಕಡಿಮೆ ನೀರು ಕುಡಿಯುದರಿಂದ ಈ ಸಮಸ್ಯೆ ಜಾಸ್ತಿಯಾಗುತ್ತದೆ. ಬೇಸಿಗೆಯ ತಾಪಮಾನ ಹೆಚ್ಚಾದಂತೆ ದೇಹದಲ್ಲಿ ಬೆವರುವಿಕೆ ಹೆಚ್ಚಾಗಿ, ನಿರ್ಜಲೀಕರಣ (Dehydration) ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದ ತಲೆನೋವು, ತಲೆತಿರುಗುವಿಕೆ ಹಾಗೂ ಆಯಾಸ ಕಾಣಿಸಿಕೊಳ್ಳಬಹುದು.
ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರಪಿಂಡದ ಕಲ್ಲುಗಳು ಹಾಗೂ ಸೋಂಕುಗಳಂತಹ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ ಚರ್ಮ ಒಣಗುವುದು, ತುರಿಕೆ, ಮಲಬದ್ಧತೆ ಮತ್ತು ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ದೇಹದಲ್ಲಿ ನೀರಿನ ಕೊರತೆಯಿಂದ ದೇಹದ ಉಷ್ಣತೆ ಹೆಚ್ಚಾಗಿ, ಶಾಖದ ಬಳಲಿಕೆ ಮತ್ತು ಶಾಖದ ಹೊಡೆತಕ್ಕೆ ಕಾರಣವಾಗಬಹುದು. ಆದ್ದರಿಂದ ಬಾಯಾರಿಕೆ ಇಲ್ಲದಿದ್ದರೂ ಸಹ ಬಿಸಿಲಿನ ಸಮಯದಲ್ಲಿ ನಿಯಮಿತವಾಗಿ ನೀರು ಕುಡಿಯುವುದು ಬಹಳ ಮುಖ್ಯ.
ಪ್ರತಿ ದಿನ ಎಷ್ಟು ನೀರು ಕುಡಿಯಬೇಕು?
ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ದಿನಕ್ಕೆ ಸುಮಾರು 2.7 ಲೀಟರ್ ಮತ್ತು ಪುರುಷರು 3.7 ಲೀಟರ್ ನೀರು ಕುಡಿಯುವುದು ಉತ್ತಮ.4 ರಿಂದ 8 ವರ್ಷ ಮಕ್ಕಳಿಳು ಸುಮಾರು 1.1 ಲೀಟರ್ 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸುಮಾರು 1.8 ಲೀಟರ್ ನೀರು ಕುಡಿಯಬೇಕು.
ಮರೆಯದೇ ಕುಡೀರಿ:
ಕೆಲಸದ ಒತ್ತಡದಲ್ಲಿ, ಮೊಬೈಲ್ ಜಂಜಾಟದಲ್ಲಿ ತುಂಬಾ ಮಂದಿಗೆ ಆಗಾಗ ನೀರು ಕುಡಿಯಲು ಆಲಸ್ಯವಾಗುವುದು, ನೀರಿನ ಬಾಟಲಿ ಹಿಡಿದುಕೊಂಡು ಕೆಲಸಕ್ಕೆ ಹೋಗಲು ನಾಚಿಕೆ ಮುಜುಗರವಾಗುದು ಸಾಮಾನ್ಯವಾಗಿದೆ. ಮೊಬೈಲ್ ಪರದೆ ನೋಡಿದಷ್ಟು ನಾಉ ನೀರು ಕುಡಿಯುವುದಿಲ್ಲ ಎನ್ನುವ ಆರೋಪವಿದೆ. ಅಂದರೆ ಮೊಬೈಲ್ ನೋಡಲು ಕೊಟ್ಟಷ್ಟು ಸಮಯವನ್ನು ಈ ಬೇಸಿಗೆಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕೇ ಬೇಕಾಗಿರುವ ನೀರನ್ನು ಕುಡಿಯಲು ಕೊಡಲ್ಲ ಎನ್ನುವುದು ಸತ್ಯವೇ. ನೀರು ಕುಡಿಯಲು ನಿಯಮಿತವಾದ ಸಮಯ ನಿಗಧಿಪಡಿಸಿಕೊಳ್ಳಿ, ಅಥವಾ ಕಣ್ಣೆದುರು ಕಾಣುವಂತೆ ನೀರಿನ ಬಾಟಲ್ ಇರಿಸಿಕೊಳ್ಳಿ. ಸಾಕಷ್ಟು ನೀರನ್ನು ಈ ಬಿರುಬಿಸಿಲಿನಲ್ಲಿ ಮರೆಯದೇ ಕುಡಿಯಿರಿ.

















