ವಾಟ್ಸಾಪ್‌ನಲ್ಲಿ ಬರಲಿದೆ ಮೆಸೇಜ್ ಶೆಡ್ಯೂಲ್ ಫೀಚರ್: ಆಫ್‌ಲೈನ್‌ನಲ್ಲಿದ್ದರೂ ನಿಗದಿತ ಸಮಯಕ್ಕೆ ಕಳಿಸುತ್ತೆ ಸಂದೇಶ!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಮೆಸೇಜ್‌ಗಳನ್ನು ಮುಂಚಿತವಾಗಿಯೇ ನಿಗದಿತ ದಿನ ಮತ್ತು ಸಮಯಕ್ಕೆ ಕಳುಹಿಸುವ ‘ಮೆಸೇಜ್ ಶೆಡ್ಯೂಲಿಂಗ್’ ಫೀಚರ್ ಅನ್ನು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು WABetaInfo ವರದಿ ತಿಳಿಸಿದೆ.

ಈ ಸೌಲಭ್ಯ ವೈಯಕ್ತಿಕ ಚಾಟ್‌ಗಳು ಮತ್ತು ಗ್ರೂಪ್ ಚಾಟ್‌ಗಳೆರಡರಲ್ಲೂ ಲಭ್ಯವಾಗಲಿದೆ. ಟೆಕ್ಸ್ಟ್ ಮೆಸೇಜ್‌ಗಳ ಜೊತೆಗೆ ಫೋಟೋ, ವಿಡಿಯೋ ಹಾಗೂ ಲಿಂಕ್‌ಗಳನ್ನು ಕೂಡ ನಿಗದಿತ ಸಮಯಕ್ಕೆ ಕಳುಹಿಸಲು ಸಾಧ್ಯವಾಗಲಿದೆ. ವಾಟ್ಸಾಪ್‌ನ 2.26.40.7 ಬೀಟಾ ಆವೃತ್ತಿಯ ಕೆಲವು ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದೆ. ಸಾಮಾನ್ಯ ಆವೃತ್ತಿಯ ಬಳಕೆದಾರರಿಗೆ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.

ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?

ಬಳಕೆದಾರರು ಚಾಟ್‌ನಲ್ಲಿ ಸಂದೇಶವನ್ನು ಟೈಪ್ ಮಾಡಿದ ಬಳಿಕ ಸೆಂಡ್ ಬಟನ್ ಅನ್ನು ಒತ್ತಿ ಹಿಡಿಯುವ ಮೂಲಕ ಈ ಸೌಲಭ್ಯವನ್ನು ಬಳಸಬಹುದು. ನಂತರ ತೆರೆಯುವ ಆಯ್ಕೆಯಲ್ಲಿ ಸಂದೇಶ ಕಳುಹಿಸಬೇಕಾದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬಹುದು.

ಫೋಟೋ ಅಥವಾ ವಿಡಿಯೋ ಕಳುಹಿಸಲು ಗ್ಯಾಲರಿಯಿಂದ ಮಾಧ್ಯಮ ಫೈಲ್ ಆಯ್ಕೆ ಮಾಡಿಕೊಂಡು, ಅಗತ್ಯವಿದ್ದರೆ ಕ್ಯಾಪ್ಷನ್ ಸೇರಿಸಿ, ಸೆಂಡ್ ಬಟನ್ ಒತ್ತಿ ಹಿಡಿದು ಸಮಯವನ್ನು ನಿಗದಿಪಡಿಸಬಹುದು.

ಎರಡು ವಾರಗಳ ಮುಂಚಿತವಾಗಿ ಸಂದೇಶ ನಿಗದಿ

ವರದಿಯ ಪ್ರಕಾರ, ಬಳಕೆದಾರರು ಎರಡು ವಾರಗಳವರೆಗೆ ಮುಂಚಿತವಾಗಿ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು. ಪ್ರಸ್ತುತ ಸಮಯಕ್ಕಿಂತ ಕನಿಷ್ಠ 10 ನಿಮಿಷಗಳ ನಂತರ ಸಂದೇಶ ಕಳುಹಿಸುವಂತೆ ನಿಗದಿಪಡಿಸಲು ಅವಕಾಶವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೆಡ್ಯೂಲ್ ಮಾಡಿದ ಸಂದೇಶಗಳನ್ನು ಚಾಟ್‌ನ ಮಾಹಿತಿಯ ವಿಭಾಗದಲ್ಲಿರುವ ‘Scheduled Messages’ ಆಯ್ಕೆಯ ಮೂಲಕ ವೀಕ್ಷಿಸಬಹುದು. ಅಗತ್ಯವಿದ್ದರೆ ಕಳುಹಿಸುವ ಮುನ್ನವೇ ಅವುಗಳನ್ನು ಅಳಿಸಬಹುದು. ಸಂದೇಶವನ್ನು ಅಳಿಸಿದ ಬಗ್ಗೆ ಸ್ವೀಕರಿಸುವವರಿಗೆ ಪ್ರತ್ಯೇಕವಾಗಿ ನೋಟಿಫಿಕೇಶನ್ ಹೋಗುವುದಿಲ್ಲ ಎಂದು ವರದಿ ತಿಳಿಸಿದೆ.

ಯಾರಿಗೆ ಹೆಚ್ಚು ಉಪಯುಕ್ತ?

ಈ ಫೀಚರ್‌ನಿಂದ ಜನ್ಮದಿನದ ಶುಭಾಶಯಗಳು, ಸಭೆಯ ನೆನಪಿನ ಸಂದೇಶಗಳು, ಬಿಲ್ ಪಾವತಿ ನೆನಪುಗಳು ಹಾಗೂ ಶುಭೋದಯದ ಸಂದೇಶಗಳನ್ನು ಮುಂಚಿತವಾಗಿ ನಿಗದಿಪಡಿಸಬಹುದು. ಉದಾಹರಣೆಗೆ, ಮಧ್ಯರಾತ್ರಿ 12 ಗಂಟೆಗೆ ಶುಭಾಶಯ ಕಳುಹಿಸಲು ಎಚ್ಚರವಾಗಿರಬೇಕಾದ ಅಗತ್ಯವಿಲ್ಲ. ಮೊದಲೇ ಸಂದೇಶವನ್ನು ಶೆಡ್ಯೂಲ್ ಮಾಡಿದರೆ ಸಾಕು.

ಈ ಸೌಲಭ್ಯವು ಬೀಟಾ ಪರೀಕ್ಷೆಯ ಹಂತದಲ್ಲಿದ್ದು, ಎಲ್ಲ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ಅಧಿಕೃತ ಪ್ರಕಟಣೆಗಾಗಿ ಕಾಯಬೇಕಿದೆ.