ಹೊಸ ನಿಯಮದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆಎಳೆದ ವಾಟ್ಸಾಪ್

ನವದೆಹಲಿ: ವಾಟ್ಸಾಪ್‌ ಕಂಪೆನಿ ತನ್ನ ಹೊಸ ನಿಯಮಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದೆ.

ನಿಮ್ಮ ಯಾವುದೇ ಖಾಸಗಿ ಮಾಹಿತಿಗಳನ್ನು ನಾವು ಫೇಸ್ಬುಕ್‌ ಜೊತೆ ಹಂಚಿಕೊಳ್ಳುವುದಿಲ್ಲ. ನೀವು ಕಳಿಸಿರುವ ಖಾಸಗಿ ಮೆಸೇಜ್‌ ಗಳನ್ನು ವೀಕ್ಷಿಸಲು ಯಾರಿಗೂ ಸಾಧ್ಯವಿಲ್ಲ ಎಂದು ವಾಟ್ಸಾಪ್‌ ಇಂದು ಬೆಳಿಗ್ಗೆ ತನ್ನ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದೆ.

ಕಂಪೆಯು ಈ ಮೊದಲು ತನ್ನ ನೂತನ ಗೌಪ್ಯತಾ ನಿಯಮಗಳನ್ನು ಬಳಕೆದಾರರು ಒಪ್ಪದಿದ್ದಲ್ಲಿ ಫೆಬ್ರವರಿಯಿಂದ ಅವರ ಖಾತೆಗಳನ್ನು ಬ್ಲಾಕ್‌ ಮಾಡಲಾಗುತ್ತದೆ ಎಂದು ಹೇಳಿತ್ತು. ಅಲ್ಲದೆ ಹೊಸ ನಿಯಮದ ಪ್ರಕಾರ ಫೇಸ್ಬುಕ್‌ ನೊಂದಿಗೆ ಮತ್ತು ಥರ್ಡ್‌ ಪಾರ್ಟಿ ಆಪ್‌ ಗಳೊಂದಿಗೆ ವಾಟ್ಸಾಪ್‌ ಖಾತೆಯ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಇದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು.

ಗೌಪ್ಯ ಮಾಹಿತಿ ಸೋರಿಕೆ ಆಗುತ್ತದೆ ಎಂಬ ಭಯದಿಂದ ಹಲವಾರು ಮಂದಿ ವಾಟ್ಸಾಪ್‌ ಬಳಕೆಯನ್ನು ನಿಲ್ಲಿಸಿ, ಟೆಲಿಗ್ರಾಂ, ಸಿಗ್ನಲ್‌ ಆಪ್‌ ಗಳನ್ನು ಡೌನ್ಲೋಡ್‌ ಮಾಡಲು ಆರಂಭಿಸಿದ್ದರು. ಇದರಿಂದ ವಾಟ್ಸಾಪ್‌ ಗೆ ಹಿನ್ನಡೆಯಾಗಿದ್ದು, ಎಚ್ಚೆತ್ತುಕೊಂಡಿರುವ ಕಂಪೆನಿಯು ತನ್ನ ಟ್ವಿಟರ್‌ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದೆ.

*ನಿಮ್ಮ ಕರೆ ಅಥವಾ ನಿಮ್ಮ ಖಾಸಗಿ ಮೆಸೇಜ್‌ ಗಳನ್ನು ವಾಟ್ಸಪ್‌, ಫೇಸ್‌ ಬುಕ್‌ ಗೆ ವೀಕ್ಷಿಸಲು ಸಾಧ್ಯವಿಲ್ಲ.

*ನಿಮಗೆ ಯಾರೆಲ್ಲಾ ಕರೆ ಮಾಡುತ್ತಾರೆ, ಮೆಸೇಜ್‌ ಮಾಡುತ್ತಾರೆ ಎಂಬ ಬಗ್ಗೆ ಪಟ್ಟಿಯನ್ನು ವಾಟ್ಸಾಪ್‌ ಸಿದ್ಧಪಡಿಸಿಟ್ಟುಕೊಳ್ಳುವುದಿಲ್ಲ.

*ನೀವು ಶೇರ್‌ ಮಾಡಿದ ಲೊಕೇಶನ್‌ ಅನ್ನು ವಾಟ್ಸಾಪ್‌‌ ಮತ್ತು ಫೇಸ್‌ ಬುಕ್‌ ಗೆ ನೋಡಲು ಸಾಧ್ಯವಿಲ್ಲ.

*ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ ಅನ್ನು ಫೇಸ್‌ ಬುಕ್‌ ಗೆ ನೀಡುವುದಿಲ್ಲ.

*ವಾಟ್ಸಾಪ್‌ ನ ಗ್ರೂಪ್‌ ಗಳು ಖಾಸಗಿಯಾಗಿಯೇ ಇರುತ್ತವೆ. ಸಾರ್ವಜನಿಕವಾಗಿರುವುದಿಲ್ಲ.

*ನಿಮ್ಮ ಮೆಸೇಜ್‌ ಅಳಿಸುವಂತಹ (ಡಿಸ್‌ ಅಪಿಯರ್)‌ ವ್ಯವಸ್ಥೆಯನ್ನು ನಿಮಗೆ ಅಳವಡಿಸಬಹುದಾಗಿದೆ.

*ನಿಮ್ಮ ಮಾಹಿತಿಗಳನ್ನು ನಿಮಗೆ ಡೌನ್ ಲೋಡ್‌ ಮಾಡಿಕೊಳ್ಳಬಹುದಾಗಿದೆ.