ಹಣ್ಣು, ತರಕಾರಿ ಸೇವನೆಗೂ ಒಂದು ಕ್ರಮವಿದೆ ಗೊತ್ತಾ? : ಡಾ. ವಾಣಿಶ್ರೀ ಐತಾಳ್ ನೀಡಿರುವ ಅಮೂಲ್ಯ ಸಲಹೆಗಳೇನು?

ಡಾ. ವಾಣಿಶ್ರೀ ಐತಾಳ್  ಎಂ.ಡಿ. (ಆಯು) ಸಿರಿ ಆಯುರ್ವೇದ ಚಿಕಿತ್ಸಾಲಯ ಸಾಲಿಗ್ರಾಮ

ಇಂದಿನ

ದಿನಗಳಲ್ಲಿ ಜಂಕ್ ಪುಡ್ ಮತ್ತು ಫ್ರಿಸರ್ವರ್‍ಡ್ ಆಹಾರಗಳ ಅತಿಯಾದ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದನ್ನು ನಾವು ನೋಡಿದ್ದೇವೆ. ಇದಲ್ಲದೆ ಬಹುಮುಖ್ಯವಾಗಿ ಪೌಷ್ಠಿಕಾಂಶವಿರುವ ಹಣ್ಣು ತರಕಾರಿಗಳನ್ನು ಸೇವನೆ ಮಾಡುವ ತಪ್ಪಾದ ಕ್ರಮವು ಕೂಡ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಸರಿಯಾದ ಆಹಾರಕ್ರಮ ಅಂದರೆ ಏನು ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಆರೋಗ್ಯಯುತ ಜೀವನಕ್ಕಾಗಿ ನಾವು ಹಣ್ಣು ಮತ್ತು ತರಕಾರಿಗಳ ಸೇವನೆಯ ಸರಿಯಾದ ಕ್ರಮವನ್ನು ತಿಳಿದುಕೊಳ್ಳೋಣ ಬನ್ನಿ.

ಆಯುರ್ವೇದದ ಪ್ರಕಾರ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ನಾವು ತಿನ್ನುವ ಆಹಾರದಿಂದ ಬರುತ್ತದೆ. ಅಲ್ಲದೇ ನಮ್ಮ ದೇಹದ ಪಚನ ಮತ್ತು ಜೀರ್ಣಶಕ್ತಿಯ ಆಧಾರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಆಯುರ್ವೇದದಲ್ಲಿ ಈ ಜೀರ್ಣ ಸಾಮರ್ಥ್ಯವನ್ನು ಜಠರಾಗ್ನಿ ಬಲ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಹಣ್ಣು ಮತ್ತು ತರಕಾರಿಗಳು ರಾಜಸಿಕ ಗುಣವಲ್ಲದೇ, ಶೀತ, ಲಘು, ಶುಷ್ಕ ಗುಣಗಳನ್ನು ಹೊಂದಿರುತ್ತದೆ. ಹಾಗಾಗಿ ಈ ಆಹಾರಗಳು ನಮಗೆ ರುಚಿ ಹೆಚ್ಚಿಸಿ ದೇಹಕ್ಕೆ ಸದಾ ಉಲ್ಲಾಸ ನೀಡುತ್ತದೆ. ಆದರೆ ಇವುಗಳ ಅತಿಯಾದ ಸೇವನೆಯಿಂದ ನಮ್ಮ ಜಠರಾಗ್ನಿ ಬಲ ಕಡಿಮೆಯಾಗಿ, ದೇಹದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆಯನ್ನು ಕಡಿಮೆ ಮಾಡುವ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಆಯುರ್ವೇದದ ಪ್ರಕಾರ ಹಣ್ಣುಗಳ ಸೇವನೆ ಹೀಗಿದೆ

ಆಯುರ್ವೇದದ ದೃಷ್ಟಿಯಲ್ಲಿ ಹಣ್ಣುಗಳು ಉಳಿದ ಆಹಾರಗಳಿಗಿಂತ ಬೇಗನೆ ಜೀರ್ಣವಾಗುತ್ತದೆ. ಆದರೆ ಹಣ್ಣುಗಳನ್ನು ಉಳಿದ ಆಹಾರಗಳ ಜೊತೆ ಸೇವನೆ ಮಾಡುವುದರಿಂದ ನಮ್ಮ ಜೀರ್ಣಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಹಣ್ಣುಗಳು ನಿಧಾನವಾಗಿ ಜೀರ್ಣವಾಗುವ ಬಹುಕಾಲ ಆಮಾಶಯದಲ್ಲಿ ಉಳಿಯುತ್ತದೆ. ಈ ನಿಧಾನವಾಗಿ ಜೀರ್ಣವಾಗುತ್ತಿರುವ ಆಹಾರ ಜೊತೆಗೆ ಗ್ರಾಸ್ಟ್ರೀಕ್ ರಸಗಳು ಸೇರಿಕೊಂಡು ಹುದುಕುವಿಕೆ ಕ್ರಿಯೆಗೆ ಒಳಗಾಗುತ್ತದೆ.

ನಿರಂತರವಾಗಿ ಇದೇ ರೀತಿ ಪ್ರಕ್ರಿಯೆದಾಗ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಪೋಷಕಾಂಶಗಳನ್ನು ಹೀರಿಕೊಳ್ಳುವ ಜೀವಕೋಶದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಮತ್ತು ಬಳಿಕ ಉಳಿಯುವ ಆಹಾರದ ತ್ಯಾಜ್ಯವು ಹೊರ ಹೋಗದೆ ದೇಹದಲ್ಲಿ ಉಳಿಯುತ್ತದೆ.

ಉಳಿಯುವ ಈ ತ್ಯಾಜ್ಯವನ್ನು ಆಮ ಎಂದು ಕರೆಯಲಾಗುತ್ತದೆ. ಈ ಆಮವು ದೇಹದಲ್ಲಿ ಕಾಯಿಲೆ ಉಂಟು ಮಾಡಲು ಪ್ರಮುಖ ಕಾರಣವಾಗುತ್ತದೆ. ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿಯೇ ಸೇವಿಸಬೇಕು ಉಳಿದ ಆಹಾರ ಜೊತೆ ಸೇವನೆ ಮಾಡಿದಾಗ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಹಾಗಾಗಿ ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಪೌಷ್ಠಿಕಾಂಶಗಳು ದೇಹ ಸಿಗಬೇಕಾದರೆ ಅದನ್ನು ನಿಗದಿತ ಸಮಯದಲ್ಲಿ ಪತ್ಯೇಕವಾಗಿ ಸೇವಿಸುವುದು ಉತ್ತಮ.

ಹಣ್ಣು, ತರಕಾರಿ ಸೇವನೆಯ ಪ್ರಶಸ್ತ ಸಮಯ ಯಾವುದು?:

ಆಯುರ್ವೇದದಲ್ಲಿ ತಿಳಿಸಿದಂತೆ ಬೆಳಿಗ್ಗಿನ ಕಾಲ ಹಣ್ಣುಗಳ ಸೇವನೆಗೆ ಪ್ರಶಸ್ತವಾದ ಸಮಯವಾಗಿದೆ. ಬೆಳಿಗ್ಗಿನ ತಿಂಡಿಯಲ್ಲಿ ಬಾಳೆಹಣ್ಣು, ಸೇಬು, ಕೀವಿ, ಮಾವಿನಹಣ್ಣು, ಮರಸೇಬು, ಆಪ್ರಿಕಾಟ್ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉತ್ತಮ. ಸಿಟ್ರಸ್ ಹಣ್ಣುಗಳಾದ ದ್ರಾಕ್ಷಿ, ನಿಂಬೆ, ದಾಳಿಂಬೆ, ಕಿತ್ತಳೆ, ಮೂಸುಂಬಿ ಮುಂತಾದ ಹಣ್ಣುಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆಗೆ ವರ್ಜ್ಯವಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ಒಳಗೆ ಈ ಹಣ್ಣು ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಡ್ರೈ ಫ್ರುಟ್ಸ್ ಗಳಾದ ಒಣ ದ್ರಾಕ್ಷಿ, ಅಂಜೀರ, ಖರ್ಜೂರುಗಳು ಬೆಳಿಗ್ಗೆ ತಿಂಡಿಗೆ ಉತ್ತಮವಾಗಿದ್ದರು ತಾಜಹಣ್ಣುಗಳ ಜೊತೆ ಸೇವಿಸುವುದು ಉತ್ತಮವಲ್ಲ.

ಹಸಿ ತರಕಾರಿಗಳನ್ನು ನಾವು ಬೆಳಿಗ್ಗೆ 10 ಗಂಟೆಯ ಬಳಿಕ ಮತ್ತು ಮಧ್ಯಾಹ್ನದ ಊಟದ ಮೊದಲು ಸೇವಿಸಲು ಅವಕಾಶವಿದೆ. ಆಯುರ್ವೇದದಂತೆ ರಾತ್ರಿ ವೇಳೆ ಹಸಿ ತರಕಾರಿಯ ಸಲಾಡ್ ಸೇವನೆ ಉತ್ತಮವಲ್ಲ. ತರಕಾರಿಗಳನ್ನು ಆದಷ್ಟು ಬೇಯಿಸಿ ಬಳಸುವುದು ಉತ್ತಮ. ಯಾಕೆಂದರೆ ಬೇಯಿಸಿದ ತರಕಾರಿಗಳಲ್ಲಿ ನಮ್ಮ ದೇಹಕ್ಕೆ ಅತೀ ಅಗತ್ಯವಾದ ಪೌಷ್ಠಿಕಾಂಶಗಳಾದ ಲೈಕೋಪಿನ್, ಕ್ಯಾರೋಟಿನ್, ಮಿಟಮಿನ್ ಮತ್ತು ಖನಿಜಾಂಶಗಳು ಹೆಚ್ಚಾಗಿ ದೊರೆಯುದಲ್ಲದೆ ಬೇಗನೆ ಜೀರ್ಣವಾಗುದರ ಜೊತೆಗೆ ದೇಹವು ಪೋಷಕಾಂಶಗಳನ್ನು ಬೇಗನೆ ಹೀರಿಕೊಳ್ಳಲು ಸಹಕಾರಿಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯ ಅಂದರೆ ತರಕಾರಿಗಳು ಅತೀಯಾಗಿ ಬೇಯಿಸಿದರೆ ಅದರಲ್ಲಿನ ಪೋಷಕಾಂಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಹಾಗಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾದ ಸಮಯ ಮತ್ತು ವಿಧಾನದಲ್ಲಿ ಬಳಸಿದರೆ ಅದು ದೇಹಕ್ಕೆ ಪೂರಕವಾಗುತ್ತದೆ. ತಪ್ಪಾದ ಬಳಕೆಯಿಂದ ಕಾಯಿಲೆಗಳಿಗೆ ನಾವು ಆಹ್ವಾನ ನೀಡಿದಂತೆ ಆಗುತ್ತದೆ.

♦ ಡಾ.ವಾಣಿಶ್ರೀ ಐತಾಳ್, ಸಾಲಿಗ್ರಾಮ