ಕಾರ್ಕಳ: ಕ್ರಿಯೇಟಿವ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ; ಕ್ರಿಯೇಟಿವ್‌ ಸಮಾಗಮ

ಕಾರ್ಕಳ: ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇದರ ವತಿಯಿಂದ ಜುಲೈ 07 ರಂದು 2023-24 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ʼಕ್ರಿಯೇಟಿವ್‌ ಸಮಾಗಮʼ ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರ್ಷಿಕ ಸಂಚಿಕೆ “ಸಪ್ತಸ್ವರ”ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಗಣನಾಥ ಶೆಟ್ಟಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಸಂಸ್ಥಾಪಕ ಅಮೃತ್‌ ರೈ ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಶ್ವತ್‌ ಎಸ್‌. ಎಲ್‌ , ಬದುಕನ್ನು ನಿರ್ಧರಿಸುವ ಪಿ.ಯು ಶಿಕ್ಷಣದಲ್ಲಿ ಮಕ್ಕಳು ತಮ್ಮ ಹೆತ್ತವರ ಭರವಸೆ ಉಳಿಸಿಕೊಳ್ಳುವಂತಹ ಸಾಧನೆ ಮಾಡುವಂತಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ ಕ್ರಿಯಾಶೀಲ ವ್ಯಕ್ತಿತ್ವದಿಂದ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ನೇರ ದಾರಿಯ ಪರಿಶ್ರಮವೇ ಸಾಧನೆಯ ಮೆಟ್ಟಿಲು ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಉದಾಸೀನ ಪ್ರವೃತ್ತಿಯವರಾಗದೆ ನಿರಂತರ ಶ್ರಮದಿಂದ ಉನ್ನತಿಗೇರುವಂತಾಗಲಿ ಎಂದರು.

2022-23 ನೇ ಸಾಲಿನ ಪ್ರಥಮ ಪಿಯುಸಿ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಾದ ವಿದ್ಯಾರ್ಥಿಗಳನ್ನು ಸಂಸ್ಥಾಪಕರಾದ ಆದರ್ಶ ಎಂ. ಕೆ ಮತ್ತು ಗಣಪತಿ ಭಟ್‌ ಕೆ. ಎಸ್‌ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

ಹಿಂದಿ ಉಪನ್ಯಾಸಕ ವಿನಾಯಕ ಜೋಗ್‌ ಸ್ವಾಗತಿಸಿದರು. ಕುಮಾರಿ ವಿಜೇತಾ ಮತ್ತು ಬಳಗದವರು ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್‌ ಎಸ್‌ ಕೆ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ಕೀರ್ತಿ ಪಾಟ್ಕರ್‌, ಯೋನಾ ಭಾಸ್ಕರ ಶೆಟ್ಟಿ, ನಾಗಶಿವಾನಿ, ಸಾನ್ವಿಕುಮಾರ್‌ ನಿರೂಪಿಸಿದರು.