ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿ: ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಸಂಕೇತ್ ಸರ್ಗರ್

ಬರ್ಮಿಂಗ್‌ಹ್ಯಾಮ್‌: ಮಹಾರಾಷ್ಟ್ರದ ಸಂಕೇತ್ ಸರ್ಗರ್ ಶನಿವಾರ, ಜುಲೈ 30 ರಂದು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. 21 ವರ್ಷ ವಯಸ್ಸಿನ ಸಂಕೇತ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸಂಕೇತ್ ಸರ್ಗರ್ ಪುರುಷರ 55 ಕೆಜಿ ವಿಭಾಗದಲ್ಲಿ ಒಟ್ಟು 248 ಕೆಜಿ (ಸ್ನ್ಯಾಚ್‌ನಲ್ಲಿ 113 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 135) ಬೆಳ್ಳಿ ಪದಕ ಗೆದ್ದಿದ್ದಾರೆ.

ಒಟ್ಟು 249 ಕೆಜಿಯೊಂದಿಗೆ ಚಿನ್ನ ಗೆದ್ದ ಮಲೇಷ್ಯಾದ ಅನಿಕ್ ಮೊಹಮದ್ ನಂತರದ ಸ್ಥಾನವನ್ನು ಭಾರತೀಯ ಪಟು ಪಡೆದಿದ್ದಾರೆ. ಶ್ರೀಲಂಕಾದ ದಿಲಂಕಾ ಯೊಡಗೆ ಒಟ್ಟು 225 ಕೆ.ಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

ಸಂಕೇತ್ ಸರ್ಗರ್ ತಮ್ಮ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ 139 ಕೆಜಿ ಎತ್ತಲು ಪ್ರಯತ್ನಿಸಿದಾಗ ಅವರ ಮೊಣಕೈಗೆ ಗಾಯವಾಗಿದೆ. ಆದರೂ ಕೂಡಾ ಗಾಯವನ್ನು ಲೆಕ್ಕಿಸದೆ ಧೈರ್ಯದಿಂದ ಕೊನೆಯ ಪ್ರಯತ್ನಕ್ಕೆ ಮಾಡಿದ್ದಾರೆ. ಆದರೆ, 139 ಕೆಜಿ ಎತ್ತಲು ಸಾಧ್ಯವಾಗಲಿಲ್ಲವಾದ್ದರಿಂದ ಬೆಳ್ಳಿ ಪದಕದೊಂದಿಗೆ ಭಾರತಕ್ಕೆ ಕೀರ್ತಿ ತಂದಿದ್ದಾರೆ.

ತಮ್ಮ ಗೆಲುವನ್ನು ಸಂಕೇತ್ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ್ದಾರೆ. ಸಂಕೇತ್ ತಮ್ಮ ಪ್ರದರ್ಶನದಿಂದ ಅಸಂತುಷ್ಟರಾಗಿದ್ದಾರೆ ತಾವು ಇನ್ನೂ ಉತ್ತಮವಾಗಿ ಎತ್ತಬಹುದಾಗಿತ್ತು ಎಂದು ಹೇಳಿಕೊಂಡಿದ್ದಾರೆ. “ನನ್ನ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜರ್ಕ್‌ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದೇನೆ, ಚಿನ್ನ ಗೆಲ್ಲಲಾಗಲಿಲ್ಲ ಎಂದು ನಿರಾಸೆ ಹೊಂದಿದ್ದೇನೆ, ಆದರೆ ಬೆಳ್ಳಿ ಪದಕವು ಸ್ವಲ್ಪ ಸಂತೋಷವನ್ನು ನೀಡುತ್ತದೆ” ಎಂದು ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.