ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಬೇಟೆ ನಿರಂತರ: ಭಾರತಕ್ಕೆ ಮೊದಲನೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು

ಬರ್ಮಿಂಗ್ ಹ್ಯಾಮ್: ಟೋಕಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಮೀರಾಬಾಯಿ ಚಾನು ಈಗ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 49 ಕಿ.ಗ್ರಾಂ ಭಾರ ವರ್ಗದಲ್ಲಿ ಒಟ್ಟು 201 ಕಿಲೋ ಭಾರ ಎತ್ತಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, ರಾಷ್ಟೀಯ ಆಟಗಳಲ್ಲಿ ಸ್ನ್ಯಾಚ್ ರೌಂಡ್ ನಲ್ಲಿ ಅತಿ ಹೆಚ್ಚು ತೂಕ 88 ಕಿಲೋ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 113 ಕಿಲೊ ಭಾರ ಎತ್ತುವ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಇದು ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಸ್ನ್ಯಾಚ್‌ ಸುತ್ತಿನಲ್ಲಿ ಮಹಿಳಾ ಅಥ್ಲೀಟ್‌ ಎತ್ತಿದ ಅತಿ ಹೆಚ್ಚು ಭಾರವಾಗಿದೆ. ಇದರೊಂದಿಗೆ ಮೀರಾಬಾಯಿ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನೂ ಮಾಡಿದ್ದಾರೆ. ಮೀರಾ ರಾಷ್ಟ್ರಮಟ್ಟದಲ್ಲಿ 88 ಕೆಜಿ ಭಾರ ಎತ್ತಿದ್ದಾರೆ. ಫೆಬ್ರವರಿಯಲ್ಲಿ 2020 ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 49 ಕೆಜಿಯಲ್ಲಿ ಚಾನು ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ಒಟ್ಟು 203 ಕೆಜಿ (ಸ್ನ್ಯಾಚ್: 88 ಕೆಜಿ, ಕ್ಲೀನ್ ಮತ್ತು ಜರ್ಕ್: 115 ಕೆಜಿ).

21 ವರ್ಷಗಳ ಬಳಿಕ ವೇಟ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಒಲಿಂಪಿಕ್ ಪದಕ ದೊರಕಿಸಿಕೊಟ್ಟ ಕೀರ್ತಿ ಮೀರಾಬಾಯಿ ಹೆಸರಿನಲ್ಲಿದೆ.