ಉಡುಪಿಯಲ್ಲಿ ಸ್ಥಳೀಯ ಹವಾಮಾನ ಮಾಹಿತಿ ನೀಡಲು ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಹವಾಮಾನ ಮೇಲ್ವಿಚಾರಣ ವ್ಯವಸ್ಥೆ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಥಳೀಯ ಹವಾಮಾನ ಮತ್ತು ಗಾಳಿಯ ಗುಣಮಟ್ಟದ ಮಾಹಿತಿಯನ್ನು ನೈಜ ಸಮಯದಲ್ಲಿ ದಾಖಲಿಸುವ ಉದ್ದೇಶದಿಂದ “ಸ್ಮಾರ್ಟ್ ವೆದರ್‍ನೆಟ್” ಎಂಬ ಸುಧಾರಿತ
ಹವಾಮಾನ ಮೇಲ್ವಿಚಾರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯೋಜನೆಯನ್ನು ಸಂಸ್ಥೆಯ ಆವರಣದಲ್ಲಿ ದಿನಾಂಕ 11 ಅಕ್ಟೋಬರ್ 2026 ರಂದು ಶ್ರೀ ಸೋದೆ ವಾದಿರಾಜ ಮಠದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಐಐಟಿ ಧಾರವಾಡದ ನಿರ್ದೇಶಕರಾದ ಡಾ. ವೆಂಕಪ್ಪಯ್ಯ ದೇಸಾಯಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ರಂಗಸ್ವಾಮಿ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಈ ಯೋಜನೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಸಂಸ್ಥೆಯ ಸಂಶೋಧನ ಅಭಿವೃದ್ಧಿ ವಿಭಾಗದ ಡೀನ್ ಡಾ. ಸಚಿನ್ ಭಟ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಡೇವಿಡ್ ಜಾನ್ ಸಲ್ಡಾನ್ಹ ಇವರ ಸಹಕಾರದೊಂದಿಗೆ ವಿದ್ಯಾರ್ಥಿಗಳಾದ ಮಣಿಕಂಠ ಸಿ ಎಚ್, ಆದಿತ್ಯ ತುಂಗ, ಕೆ ಮನೀಶ್ ಕುಮಾರ್, ಮದನ್, ಪೃಥ್ವಿಶ್ ಕುಮಾರ್ ಹಾಗೂ ಶಶಾಂಕ ಎಸ್ ಇವರು ಅಭಿವೃದ್ದಿ ಪಡಿಸಿದ್ದಾರೆ.

*ಸ್ಥಳೀಯ ಹವಾಮಾನದ ನಿಖರ ಮಾಹಿತಿ:*
ಸಾಂಪ್ರದಾಯಿಕ ಹವಾಮಾನ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಅವುಗಳನ್ನು ಎಲ್ಲಾ ಪ್ರದೇಶದಲ್ಲಿ ಸ್ಥಾಪಿಸುವುದು ಕಷ್ಟ ಇದರಿಂದ ಸ್ಥಳೀಯ ಮಟ್ಟದ ಹವಾಮಾನ ವ್ಯತ್ಯಾಸವನ್ನು ಗುರುತಿಸುವಲ್ಲಿ ಮಿತಿಗಳಿರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದಾದ ಹವಾಮಾನ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಈ ಸ್ಮಾರ್ಟ್ ವೆದರ್‍ನೆಟ್‍ನ ಪ್ರಮುಖ
ಉದ್ದೇಶವಾಗಿದೆ.
ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದ ಮಾಲಿನ್ಯಕಾರಕಗಳ ಮಾಹಿತಿಯನ್ನೂ ಈ ವ್ಯವಸ್ಥೆಯ ಮೂಲಕ ಮೇಲ್ವಿಚಾರಣೆ ಮಾಡಬಹುದು. ಇ ಪಿ ಎಸ್ ತಂತ್ರಜ್ಞಾನದ ನೆರವಿನಿಂದ ಕೇಂದ್ರದ ಭೌಗೋಳಿಕ ಸ್ಥಳವನ್ನು ಗುರುತಿಸಿ ಸಂಗ್ರಹಿಸಿದ ದತ್ತಾಂಶವನ್ನು ನಿರ್ದಿಷ್ಟ ಪ್ರದೇಶದೊಂದಿಗೆ ಸಂಬಂಧಿಸಬಹುದು.

*ಉಡುಪಿ ಜಿಲ್ಲಾದ್ಯಂತ ಹವಮಾನ ಕೇಂದ್ರಗಳ ಜಾಲ:*
ಉಡುಪಿ ಜಿಲ್ಲೆಯ ಕರಾವಳಿ, ನಗರ, ಗ್ರಾಮೀಣ ಮತ್ತು ಕೃಷಿ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳು ವಿಭಿನ್ನವಾಗಿರುತ್ತವೆ. ಈ ವ್ಯತ್ಯಾಸಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳ ಮಾಹಿತಿಯನ್ನು ಒಂದೇ ವ್ಯವಸ್ಥೆಯಡಿ ಸಂಯೋಜಿಸುವುದು ಯೋಜನೆಯ ಮುಂದಿನ ಗುರಿ. ಇಂತಹ ಜಾಲದ ಮೂಲಕ ವಿವಿಧ ಪ್ರದೇಶಗಳ ಹವಾಮಾನ ಪರಿಸ್ಥಿತಿಯನ್ನು ಪರಸ್ಪರ ಹೋಲಿಕೆ ಮಾಡಬಹುದು. ಇದರಿಂದ ಸ್ಥಳೀಯ ಪರಿಸರದ ವೈಶಿಷ್ಟ್ಯಗಳನ್ನು ಗುರುತಿಸಲು ಮತ್ತು ಪ್ರದೇಶವಾರು ದತ್ತಾಂಶದ ಆಧಾರದ ಮೇಲೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ.

*ಹವಾಮಾನ ಸಂಶೋಧನೆ ಮತ್ತು ಮುನ್ಸೂಚನೆಗೆ ನೆರವು:*
ದೀರ್ಘಕಾಲದವರೆಗೆ ಸಂಗ್ರಹವಾಗುವ ಹವಾಮಾನ ದತ್ತಾಂಶವು ಸ್ಥಳೀಯ ಹವಾಮಾನದ ಪ್ರವೃತ್ತಿಗಳು ಮತ್ತು ಕಾಲಾನುಸಾರ ಉಂಟಾಗುವ ಬದಲಾವಣೆಗಳನ್ನು ವಿಶ್ಲೇಷಿಸಲು
ಉಪಯುಕ್ತವಾಗಲಿದೆ ಈ ಮಾಹಿತಿಯನ್ನು ಇತರ ಹವಾಮಾನ ಮೂಲಗಳಿಂದ ಲಭ್ಯವಾಗುವ ದತ್ತಾಂಶದೊಂದಿಗೆ ಸಂಯೋಜಿಸಿ ವೈಜ್ಞಾನಿಕ ಅದ್ಯಯನಗಳಿಗೆ ಬಳಸಬಹುದಾಗಿದೆ.
ಮುಂದಿನ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಹವಾಮಾನ ಮುನ್ಸೂಚನಾ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮತ್ತು
ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯು ಸ್ಥಳೀಯ ಮನ್ಸೂಚನೆಗಳ ಗುಣಮಟ್ಟವನ್ನು ಸುಧಾರಿಸುವ ಸಂಶೋಧನೆಗೆ ನೆರವಾಗಬಹುದು.

*ಕೃಷಿ, ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆಗೆ ಉಪಯೋಗ:*
ಸ್ಥಳೀಯ ಪರಿಸರದ ಕುರಿತು ವಿಶ್ವಾಸಾರ್ಹ ದತ್ತಾಂಶ ಲಭ್ಯವಿರುವುದು, ಕೃಷಿಯೋಜನೆ, ಜಲಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ಅಧ್ಯಯನದಂತಹ ಕ್ಷೇತ್ರಗಳಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗಬಹುದು. ಇಂತಹ ಮಾಹಿತಿಯು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಬಳಸುವ ಮತ್ತು ಪರಿಸರ ಸಂಬಂಧಿತ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಿಗೆ ಪೂರಕವಾಗಲಿದೆ.
ವೆಬ್‍ಸೈಟ್ ಮೂಲಕ ಸಾರ್ವಜನಿಕರಿಗೆ ಮಾಹಿತಿ “ಸ್ಮಾರ್ಟ್ ವೆದರ್‍ನೆಟ್ ಮೂಲಕ ಸಂಗ್ರಹವಾಗುವ ಮಾಹಿತಿಯನ್ನು ಸಾರ್ವಜನಿಕರು https://sode-edu.in/smvitm/weathernet ಮೂಲಕ ಆನ್‍ಲೈನ್‍ನಲ್ಲಿ ವೀಕ್ಷೀಸಬಹುದು. ಈ ವೇದಿಕೆಯು ವಿದ್ಯಾರ್ಥಿಗಳು, ಸಂಶೋಧಕರು, ರೈತರು, ಪರಿಸರಾಸಕ್ತರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ದತ್ತಾಂಶವನ್ನು ಸುಲಭವಾಗಿ ತಲುಪಿಸುವ ಉದ್ದೇಶವನ್ನು ಹೊಂದಿದೆ ಅಲ್ಲದೆ ವೆಬ್‍ಸೈಟ್‍ನಲ್ಲಿ ಲಭ್ಯವಾಗುವ ಮಾಹಿತಿಯನ್ನು ಅಧ್ಯಯನ, ಶೈಕ್ಷಣಿಕ ಚಟುವಟಿಕೆಗಳು
ಮತ್ತು ಸ್ಥಳೀಯ ಪರಿಸರದ ಕುರಿತು ಅರಿವು ಮೂಡಿಸುವ ಉದ್ದೇಶಗಳಿಗೆ ಬಳಸಿಕೊಳ್ಳಬಹುದು.

ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ: ಈ ಉಪಕ್ರಮದಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಗುರುತಿಸುವಿಕೆ, ತಾಂತ್ರಿಕ ಅಧ್ಯಯನ ವ್ಯವಸ್ಥೆಯ ವಿನ್ಯಾಸ ಮತ್ತು ದತ್ತಾಂಶ ಸಂಗ್ರಹಣೆಯ
ವ್ಯವಸ್ಥೆಯ ಅಭಿವೃದ್ಧಿ ಸೇರಿದಂತೆ ವಿವಿಧ ಹಂತಗಳಲ್ಲಿ ಭಾಗವಹಿಸಿದ್ದಾರೆ. ಇದರಿಂದ ತರಗತಿಯಲ್ಲಿ ಕಲಿತ ತಾಂತ್ರಿಕ ಜ್ಞಾನವನ್ನು ನೈಜ ಪರಿಸರದ ಸಮಸ್ಯೆಗೆ ಅನ್ವಹಿಸುವ ಅವಕಾಶ ದೊರೆತಿದೆ.
ಹವಾಮಾನ ದತ್ತಾಂಶದ ವಿಶ್ವಾಸಾರ್ಹತೆ, ಮಾಹಿತಿ ರವಾನೆ ಮತ್ತು ಸುರಕ್ಷಿತ ದತ್ತಾಂಶ ಸಂಗ್ರಹಣೆಗೆ ಒತ್ತು ನೀಡಿರುವ ಈ ಪ್ರಯತ್ನವು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಮತ್ತು ಸಂಶೋಧನಾ ಆಶಕ್ತಿಯನ್ನು ಬೆಳೆಸುವ ವೇದಿಕೆಯಾಗಿದೆ.