ನವದೆಹಲಿ: ಕಾರು ಮತ್ತು ಎಸ್‌ಯುವಿಗಳ ಹಿಂಬದಿ ಸೀಟಿನಲ್ಲಿರುವ ಸವಾರರು ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಅವರಿಗೆ ದಂಡ ವಿಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಘೋಷಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಈ ಸಂಬಂಧ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು. ಜನರಲ್ಲಿ ಸೀಟ್ ಬೆಲ್ಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಕ್ರಿಕೆಟಿಗರು ಮತ್ತು ಬಾಲಿವುಡ್ ನಟರನ್ನು ಬಳಸಲಾಗುವುದು ಎಂದು ಅವರು ದೆಹಲಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಭಾನುವಾರ ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಚಿವರಿಂದ ಈ ಮಾಹಿತಿ ಬಂದಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಸಾವನ್ನಪ್ಪಿದ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರಿನ ಹಿಂಭಾಗದಲ್ಲಿದ್ದರು ಮತ್ತು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹೀಗಾಗಿ ಅಫಘಾತವಾದಾಗ ಅವರ ಎದೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಇದು ಅವರ ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಸೈರಸ್ ಮಿಸ್ತ್ರಿ ಅವರ ಅಪಘಾತದ ಕಾರಣ, ಚಾಲಕ ಮತ್ತು ಮುಂಬದಿ ಸೀಟಿನಲ್ಲಿ ಇರುವಂತೆ ಹಿಂದಿನ ಸೀಟಿನಲ್ಲಿಯೂ ಸೀಟ್ ಬೆಲ್ಟ್‌ಗೆ ಅಲಾರಂ ಇರಬೇಕೆಂದು ನಿರ್ಧರಿಸಿದ್ದು, ಇದರ ಜೊತೆಗೆ ಸಚಿವಾಲಯವು ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ಎಲ್ಲಾ ಪ್ರಯಾಣಿಕರ ಸುರಕ್ಷಿತತೆಯ ದೃಷ್ಟಿಯಿಂದ ಹಿಂಬದಿ ಸೀಟಿನಲ್ಲಿರುವವರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಲಿದೆ.