ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನಿಂದ ‘ವೀ ದಿ ಪೀಪಲ್ ಆಫ್ ಇಂಡಿಯಾ’ ನಾಟಕ ಪ್ರದರ್ಶನ

ಉಡುಪಿ: ಭಾರತದ ಎಲ್ಲರೂ  ನಮ್ಮ ಸಂವಿಧಾನವನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡರೆ, ನಾವು ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳು  ಸರಳವಾಗಿ ಪರಿಹಾರವಾಗುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಸಂದೇಶ್ ಜವಳಿ ನುಡಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ಶಿವಮೊಗ್ಗ ರಂಗಾಯಣದ ಭಾರತ ಸಂವಿಧಾನದ ಕುರಿತ ನಾಟಕ ‘ವೀ ದಿ ಪೀಪಲ್ ಆಫ್ ಇಂಡಿಯಾ’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಅಸಮಾನತೆ, ಅನ್ಯಾಯ, ಜಾತಿ ಮತ್ತು ಧರ್ಮದ ತಾರತಮ್ಯದ ಸಮಸ್ಯೆಗಳನ್ನು ನಮ್ಮ  ಸಂವಿಧಾನದ ಓದಿನ ಮೂಲಕ ಅರ್ಥ ಮಾಡಿಕೊಳ್ಳಬಹುದು ಮತ್ತು ಪರಿಹರಿಸಬಹುದು ಎಂದು ಅವರು ಹೇಳಿದರು.

ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಶೋಭಾ ಕಾಮತ್ ಮಾಹೆ ವಿಶ್ವವಿದ್ಯಾನಿಲಯವು ಮತ್ತೊಮ್ಮೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡುವ ಮೂಲಕ ಇನ್ನಷ್ಟು ಕಳೆಗೊಳ್ಳಲಿದೆ ಎಂದರು.

ಸುಮಾರು ಎರಡು ವರ್ಷಗಳ ನಂತರ ಈ ರೀತಿಯ ಕಲಾಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದರಿಂದ ಇದೊಂದು ‘ಕಥಾರ್ಟಿಕ್’ ಕ್ಷಣ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಬಣ್ಣಿಸಿದರು.

ಈ ನಾಟಕವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಸಾರುತ್ತದೆ ಎಂದು ಪ್ರೊ ಫಣಿರಾಜ್ ಹೇಳಿದರು. ಶ್ರಾವ್ಯ ಬಾಸ್ರಿ ವೈಷ್ಣವ ಜನತೋ ಹಾಡಿದರು ಮತ್ತು ಅಭಿನಯ ಕಾರ್ಯಕ್ರಮ ನಿರೂಪಿಸಿದರು.

ಅನೇಕ ಉತ್ಸಾಹಭರಿತ ಸನ್ನಿವೇಶಗಳು, ಹಾಡು, ನೃತ್ಯ ಮತ್ತು ಇತರ ಗಮನೀಯ ಅಂಶಗಳೊಂದಿಗೆ ಭಾರತೀಯ ಸಂವಿಧಾನದ ಸಾರವನ್ನು ಸ್ಪಷ್ಟವಾಗಿ ಸೆರೆ ಹಿಡಿಯುವುದರೊಂದಿಗೆ ‘ವೀ ದಿ ಪೀಪಲ್ ಆಫ್ ಇಂಡಿಯಾ’ ನಾಟಕ ಪ್ರದರ್ಶನಗೊಂಡಿತು.