ಮಂಗಳೂರು: ‘ಪ್ರತ್ಯೇಕ ತುಳು ರಾಜ್ಯದ ಹೋರಾಟಕ್ಕಾಗಿ ನಾವು ಬ್ಲಾಸ್ಟ್ ಮಾಡಬೇಕು’ (ತುಳು ರಾಜ್ಯಗಾದ್ ನಮ ಒಂಜಿ ಬ್ಲಾಸ್ಟ್ ಮಲ್ಪೊಡು ) ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದ್ದಾರೆ ಎನ್ನಲಾದ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್‌ಗಳಿಗೆ ಬೆಂಕಿ ಹಚ್ಚಬೇಕು. ಆಗ ಸರ್ಕಾರ ನಮ್ಮನ್ನು ಸಂಧಾನಕ್ಕೆ ಕರೆಸುತ್ತದೆ. ಅಲ್ಲಿ, ತುಳುವನ್ನು ಅಧಿಕೃತ ರಾಜ್ಯ ಭಾಷೆ ಎಂದು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟಗಾರರನ್ನು ಸಮಾಧಾನಪಡಿಸಲು ಆಗಲ್ಲ ಎಂದು ನಾವು ಸರ್ಕಾರಕ್ಕೆ ಹೇಳಲು ಸಾಧ್ಯ ಎಂದು ಆಡಿಯೊದಲ್ಲಿ ಹೇಳಲಾಗಿದೆ.
ದಯಾನಂದ ಕತ್ತಲ್‌ಸಾರ್ ನೀಡಿದ ಈ ಪ್ರಚೋದನಾತ್ಮಕ ಆಡಿಯೊವನ್ನು ರೆಕಾರ್ಡ್ ಮಾಡಿರುವುದು ನಾವೇ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ಈ ಹಿಂದೆಯೇ ತಂದಿದ್ದೆವು ಎಂದು ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್ ತಿಳಿಸಿದ್ದಾರೆ.
ತೇಜೋವಧೆ ಮಾಡುವ ಷಡ್ಯಂತ್ರ:
ಆಡಿಯೊದಲ್ಲಿನ ಧ್ವನಿ ನನ್ನ ಸ್ವರ ಶೈಲಿಯಂತಿದೆ. ಆದರೆ, ನನ್ನ ಧ್ವನಿಯನ್ನು ರೆಕಾರ್ಡ್ ಮಾಡಿ, ಬಳಿಕ ತಿರುಚಿದ್ದಾರೆ. ನಾನು ಹಿಂಸೆಗೆ ಪ್ರಚೋದಿಸುವುದಿಲ್ಲ. ಇದು ನನ್ನ ತೇಜೋವಧೆಗೆ ಮಾಡಿರುವ ಷಡ್ಯಂತ್ರ ಎಂದು ದಯಾನಂದ ಕತ್ತಲ್‌ಸಾರ್ ಹೇಳಿದ್ದಾರೆ.