ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ (Ayyappa Swamy Temple) ಭೇಟಿ ನೀಡುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಎಚ್ಚರಿಕೆ ನೀಡಿದೆ. ಪವಿತ್ರ ಪಂಪಾ ನದಿಗೆ ಬಟ್ಟೆಗಳನ್ನ ಎಸೆಯುವುದು ಅಥವಾ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಇನ್ಮುಂದೆ ಗರಿಷ್ಠ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ನದಿಯ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪಂಪಾ ನದಿಯ (Pamba river) ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಶಬರಿಮಲೆ ಹಾಗೂ ಪಂಪಾ ನದಿಯ ಸ್ವಚ್ಛತೆ ಕಾಪಾಡುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ಪವಿತ್ರ ನದಿಗೆ ಬಟ್ಟೆ, ಪ್ಲಾಸ್ಟಿಕ್ ಅಥವಾ ಯಾವುದೇ ರೀತಿಯ ತ್ಯಾಜ್ಯವನ್ನ ಎಸೆಯಬೇಡಿ. ಮುಂದಿನ ಪೀಳಿಗೆಗಳಿಗಾಗಿ ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನ ಕಾಪಾಡೋಣ ಎಂದು ಕರೆ ನೀಡಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನಡೆಯುವ ʻಮಕರವಿಳಕ್ಕುʼ ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಗೆ ಆಗಮಿಸುತ್ತಾರೆ. ಯಾತ್ರೆಯ ಭಾಗವಾಗಿ ಪವಿತ್ರ ಪಂಪಾ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ, ಸ್ನಾನದ ಬಳಿಕ ಅನೇಕ ಭಕ್ತರು ತಾವು ಧರಿಸಿದ್ದ ಒದ್ದೆ ಬಟ್ಟೆಗಳನ್ನ ನದಿಯಲ್ಲೇ ಬಿಟ್ಟು ಹೋಗುತ್ತಿರುವುದು ನದಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.
ಪಂಪಾ ನದಿಗೆ ಬಟ್ಟೆ ಎಸೆದ್ರೆ 5,000 ದಂಡ
ಜಿಲ್ಲಾಡಳಿತದ ಪ್ರಕಾರ, ಉತ್ಸವದ ಅವಧಿಯಲ್ಲಿ ಪ್ರತಿದಿನ ಹಲವು ಟನ್ಗಳಷ್ಟು ಬಟ್ಟೆಗಳನ್ನು ಪಂಪಾ ನದಿಗೆ ಎಸೆಯಲಾಗುತ್ತಿದೆ. ಧಾರ್ಮಿಕ ಸಂಪ್ರದಾಯದ ಹೆಸರಿನಲ್ಲಿ ನದಿಯನ್ನ ಕಲುಷಿತಗೊಳಿಸುವ ಈ ಅಭ್ಯಾಸಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಇದೀಗ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಹೊಸ ಆದೇಶದ ಪ್ರಕಾರ, ಪಂಪಾ ನದಿಗೆ ಬಟ್ಟೆ ಅಥವಾ ಇತರ ತ್ಯಾಜ್ಯಗಳನ್ನು ಎಸೆಯುವುದು ಹಾಗೂ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದಲ್ಲಿ ಸ್ಥಳದಲ್ಲೇ ಗರಿಷ್ಠ 5,000 ದಂಡ ವಿಧಿಸಲಾಗುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆ, 1994ರ ಸೆಕ್ಷನ್ 219N(1) ಮತ್ತು (3)ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ದಂಡದ ಮೊತ್ತವನ್ನು 15 ದಿನಗಳ ಒಳಗೆ ಪಾವತಿ ಮಾಡದಿದ್ದರೆ, ಕಾನೂನು ಕ್ರಮ ಕೂಡ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ.















