ಕಾಲೇಜು ಕ್ಯಾಂಪಸ್ ನಲ್ಲಿ ಓಡಾಡುತ್ತಿದ್ದ ನಾಯಿಯನ್ನು ಹೊಡೆದು ಸಾಯಿಸಿದ ವಾರ್ಡನ್ ಗಳ ಮೇಲೆ ಕ್ರಮ

ಕಾಪು: ಕಾಲೇಜು ಕ್ಯಾಂಪಸ್ ನಲ್ಲಿ ಓಡಾಡುತ್ತಿದ್ದ  ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಬಡಿದು ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಶಿರ್ವ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕ್ಯಾಂಪಸ್ ನಲ್ಲಿ ನಾಯಿ ಓಡಾಡುತ್ತಿದ್ದು ಇದನ್ನು ಕಂಡ ವಿದ್ಯಾರ್ಥಿನಿಯೊಬ್ಬಳು ಹೆದರಿಕೊಂಡು ಈ ಬಗ್ಗೆ ದೂರು ನೀಡಿರುವುದಕ್ಕೆ ಸಂಬಂಧಿಸಿದಂತೆ ಕಾಲೇಜಿನ ವಾರ್ಡನ್ ಗಳು ಈ ನಾಯಿಯನ್ನು ಕೊಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎನ್ನಲಾದ ವೀಡಿಯೋ ಹಳೆಯದಾಗಿದ್ದು, ಇದಕ್ಕೂ ಘಟನೆಗೂ ಸಂಬಂಧವಿಲ್ಲ . ಇದು ಆ ನಾಯಿಯ ಜೊತೆ ಕಳೆದ ಸಮಯವನ್ನು ವಿದ್ಯಾರ್ಥಿಗಳು ಸೆರೆಹಿಡಿದ ಹಳೆಯ ವೀಡಿಯೋ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಂಜುಳಾ ಕರ್ಕೇರ ಎಂಬವರು ನೀಡಿದ ದೂರಿನ ಮೇಲೆ ಆರೋಪಿ ವಾರ್ಡನ್ ಗಳಾದ ನಾಗರಾಜ್ ಮತ್ತು​ ರಾಜೇಶ್ ವಿರುದ್ದ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನಿಮಲ್ ರೈಟ್ಸ್ ಲಾಯರ್ ಹಾಗೂ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಬಬಿತಾ ಮಧ್ವರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಾರ್ಡನ್ ನಾಗರಾಜ್ ಹಾಗೂ ರಾಜೇಶ್ ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಸಾಯಿಸಿ, ಬಳಿಕ ಕಾಲೇಜಿನ ಗಾಡಿಯಲ್ಲಿ ಶವವನ್ನು ಕೊಂಡುಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 428-29 ಮತ್ತು ಪಿಸಿಎ ಆಕ್ಟ್ 11 ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ.

ಚಿತ್ರದಲ್ಲಿರುವುದು ಆ ನಾಯಿಯ ಹಳೇ ವಿಡಿಯೋದಿಂದ ತೆಗೆಯಲಾದ ಫೋಟೋ.