ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ; ಐದು ಉನ್ನತ ಖಾತೆಗಳ ಬೇಡಿಕೆ: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ

ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಸುನ್ನಿ ಉಲ್ಮಾ ಮಂಡಳಿಯ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಜೊತೆಗೆ ಐವರು ಮುಸ್ಲಿಂ ಶಾಸಕರನ್ನು ಗೃಹ, ಕಂದಾಯ, ಆರೋಗ್ಯ ಮತ್ತು ಇತರ ಇಲಾಖೆಗಳಂತಹ ಉತ್ತಮ ಖಾತೆಗಳ ಸಚಿವರನ್ನಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ.

“ಉಪಮುಖ್ಯಮಂತ್ರಿ ಮುಸ್ಲಿಂ ಆಗಿರಬೇಕು, 30 ಸೀಟು ಕೊಡಿ ಎಂದು ಚುನಾವಣೆಗೂ ಮುನ್ನವೇ ಹೇಳಿದ್ದೆವು… ನಮಗೆ 15 ಸಿಕ್ಕಿದ್ದು, ಒಂಬತ್ತು ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಸುಮಾರು 72 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಮುಸಲ್ಮಾನರಿಂದಲೇ. ಒಂದು ಸಮುದಾಯವಾಗಿ ನಾವು ಕಾಂಗ್ರೆಸ್‌ಗೆ ಸಾಕಷ್ಟು ಕೊಟ್ಟಿದ್ದೇವೆ. ಈಗ ನಾವು ಪ್ರತಿಯಾಗಿ ಏನನ್ನಾದರೂ ಪಡೆಯುವ ಸಮಯವಾಗಿದೆ. ನಮಗೆ ಒಬ್ಬ ಮುಸ್ಲಿಂ ಉಪಮುಖ್ಯಮಂತ್ರಿ ಮತ್ತು ಗೃಹ, ಕಂದಾಯ ಮತ್ತು ಶಿಕ್ಷಣದಂತಹ ಉತ್ತಮ ಖಾತೆಗಳನ್ನು ಹೊಂದಿರುವ ಐದು ಸಚಿವ ಸ್ಥಾನ ಬೇಕು. ಈ ರೀತಿಯಾಗಿ ಧನ್ಯವಾದ ಹೇಳುವುದು ಕಾಂಗ್ರೆಸ್‌ನ ಜವಾಬ್ದಾರಿ. ಇವೆಲ್ಲವೂ ಕಾರ್ಯರೂಪಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುನ್ನಿ ಉಲ್ಮಾ ಮಂಡಳಿಯ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದೇವೆ” ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ ಹೇಳಿದ್ದಾರೆ.

ಒಂಬತ್ತು ಮಂದಿಯಲ್ಲಿ ಯಾರಿಗೆ ಈ ಹುದ್ದೆಗಳು ಸಿಗುತ್ತವೆ ಎಂಬುದು ಅಪ್ರಸ್ತುತ. ಯಾರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಮತ್ತು ಉತ್ತಮ ಅಭ್ಯರ್ಥಿ ಎಂಬುದನ್ನು ಆಧರಿಸಿ ಕಾಂಗ್ರೆಸ್ ನಿರ್ಧರಿಸುತ್ತದೆ. ಚುನಾವಣೆಗೂ ಮುನ್ನವೇ ಈ ಬೇಡಿಕೆ ಇಟ್ಟಿದ್ದೆವು ಎಂದು ಪುನರುಚ್ಛರಿಸಿದ ಮುಖಂಡ “ಇದು ಖಚಿತವಾಗಿ ಸಂಭವಿಸಬೇಕು. ಚುನಾವಣೆಗೂ ಮುನ್ನವೇ ಇದು ನಮ್ಮ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಬೇಕು. ಉಪಮುಖ್ಯಮಂತ್ರಿ ಮುಸ್ಲಿಂ ಎಂದು ಮಾತ್ರ ಕೇಳುತ್ತಿದ್ದೇವೆ. ನಿಜವಾಗಿ, ಅದು ಮುಸ್ಲಿಂ ಸಿಎಂ ಆಗಿರಬೇಕು ಏಕೆಂದರೆ ಕರ್ನಾಟಕವು ತನ್ನ ಇತಿಹಾಸದಲ್ಲಿ ಇದುವರೆಗೂ ಮುಸ್ಲಿಂ ಸಿಎಂ ಹೊಂದಿಲ್ಲ,ರಾಜ್ಯದಲ್ಲಿ 90 ಲಕ್ಷ ಜನರು ಮುಸ್ಲಿಮರಿದ್ದಾರೆ. ಎಸ್‌ಸಿಗಳನ್ನು ಹೊರತುಪಡಿಸಿ ನಾವು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದೇವೆ. ನಾವು ಬಯಸಿದ 30+ ಸೀಟುಗಳು ಸಿಗಲಿಲ್ಲ. ಎಸ್‌ಎಂ ಕೃಷ್ಣ ಅವಧಿಯಲ್ಲಿ ಐದು ಮುಸ್ಲಿಂ ಶಾಸಕರಿಗೆ ಮಂತ್ರಿಸ್ಥಾನ ದೊರಕಿತ್ತು. ಈಗ ಉಪಮುಖ್ಯಮಂತ್ರಿಯಾಗಬೇಕು. ಅದನ್ನೇ ನಾವು ಬಯಸುತ್ತೇವೆ,” ಎಂದಿದ್ದಾರೆ.