ಆರ್‌ಎಸ್‌ಎಸ್ ನಾಯಕ ರುದ್ರೇಶ್ ಕೊಲೆಗಾರ ಮೊಹಮ್ಮದ್ ಘೌಸ್ ನಯಾಜಿ ಬಂಧನ: ದ. ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರ

ನವದೆಹಲಿ: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪದಾಧಿಕಾರಿಯನ್ನು ಕೊಂದ ಆರೋಪಿ ಮೊಹಮ್ಮದ್ ಘೌಸ್ ನಯಾಜಿಯನ್ನು ಬಂಧಿಸಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯ ನಯಾಜಿ 2016ರಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಆರ್ ರನ್ನು ಸಂಚು ರೂಪಿಸಿ ಹತ್ಯೆಗೈದಿದ್ದ.

35 ವರ್ಷದ ರುದ್ರೇಶ್ ಆರ್‌ಎಸ್‌ಎಸ್‌ನ ಶಿವಾಜಿನಗರ ಶಾಖೆಯ ಮಂಡಲ ಅಧ್ಯಕ್ಷ ಮತ್ತು ಬಿಜೆಪಿ ಶಿವಾಜಿನಗರ ಕಾರ್ಯದರ್ಶಿಯಾಗಿದ್ದರು. ಘಟನೆಯ ನಂತರ, ನಯಾಜಿ ದೇಶದಿಂದ ಓಡಿಹೋಗಿ ವಿದೇಶದಲ್ಲಿ ವಿವಿಧ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು.

ಮೂಲಗಳ ಪ್ರಕಾರ, ಗುಜರಾತ್ ಎಟಿಎಸ್ ಮೊದಲು ನಯಾಜಿಯ ಸ್ಥಳವನ್ನು ಪತ್ತೆಹಚ್ಚಿತು, ನಂತರ ಕೇಂದ್ರ ಏಜೆನ್ಸಿಗಳಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಸ್ವೀಕರಿಸಿದ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡವು ನಯಾಜಿಯನ್ನು ಬಂಧಿಸಿ ಭಾರತಕ್ಕೆ ಕರೆತಂದಿದೆ.

ನಯಾಜಿಯ ಬಂಧನವು ಮಹತ್ವದ ಬೆಳವಣಿಗೆಯಾಗಿದ್ದು, ವಿಚಾರಣೆಯ ಸಮಯದಲ್ಲಿ, ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿ PFI ಮಾಡ್ಯೂಲ್ ಅನ್ನು ನಡೆಸುತ್ತಿರುವ ಜನರ ಬಗ್ಗೆ ಕೇಂದ್ರೀಯ ಸಂಸ್ಥೆಗಳು ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.