ಉಡುಪಿ: ಮನೆಯಲ್ಲಿ ಬಳಸಿ ಉಳಿದಿರುವ ಅಥವಾ ಬಳಕೆಯಾಗದೆ ಉತ್ತಮ ಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಬಡ ಹಾಗೂ ಪಾದರಕ್ಷೆರಹಿತ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ‘ನಡಿಗೆ’ ಸಾಮಾಜಿಕ ಅಭಿಯಾನವನ್ನು ಅ.23ರಿಂದ 25ರವರೆಗೆ ನಗರದ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕ ಅವಿನಾಶ್ ಕಾಮತ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಸಾರ್ವಜನಿಕರು ತಾವು ಬಳಸಿದ ಉತ್ತಮ ಗುಣಮಟ್ಟದ ಶೂ, ಸ್ಲಿಪರ್, ರಬ್ಬರ್ ಶೂ ಹಾಗೂ ಚಪ್ಪಲಿಗಳನ್ನು ದಾನವಾಗಿ ನೀಡಬಹುದು. ಆದರೆ ಹೀಲ್ಸ್ ಹಾಗೂ 10 ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದಿಲ್ಲ. ದಾನ ನೀಡಲು ಇಚ್ಛಿಸುವವರು ಅ.23ರಿಂದ 25ರವರೆಗೆ ಎಂಜಿಎಂ ಕಾಲೇಜಿಗೆ ಪಾದರಕ್ಷೆಗಳನ್ನು ತಂದು ನೀಡಬಹುದು ಎಂದು ತಿಳಿಸಿದ್ದಾರೆ.
18 ಸಾವಿರ ಪಾದರಕ್ಷೆ ಸಂಗ್ರಹ:
2023ರಲ್ಲಿ ನಡೆದ ಮೊದಲ ‘ನಡಿಗೆ’ ಅಭಿಯಾನದಲ್ಲಿ 5ರಿಂದ 6 ಸಾವಿರ ಪಾದರಕ್ಷೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಉಡುಪಿಯ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತು ಸುಮಾರು 18 ಸಾವಿರ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿತ್ತು. ಈ ಪ್ರಯತ್ನವನ್ನು ಗುರುತಿಸಿದ ಗ್ರೀನ್ಸೋಲ್ ಫೌಂಡೇಶನ್, ದೇಶದಲ್ಲೇ ಈ ಮಾದರಿಯ ಅಭಿಯಾನ ಮೊದಲ ಬಾರಿಗೆ ನಡೆದಿರುವುದಾಗಿ ಪ್ರಮಾಣಪತ್ರ ನೀಡಿ ಗೌರವಿಸಿತ್ತು ಎಂದು ತಿಳಿಸಿದರು.
ಸಂಗ್ರಹಿಸಲಾದ ಪಾದರಕ್ಷೆಗಳನ್ನು ಮುಂಬೈ ಮೂಲದ ಗ್ರೀನ್ಸೋಲ್ ಸಂಸ್ಥೆಗೆ ಕಚ್ಚಾ ವಸ್ತುವಿನ ರೂಪದಲ್ಲಿ ನೀಡಲಾಗುವುದು. ಸಂಸ್ಥೆಯು ಅವುಗಳನ್ನು ಮರುಬಳಕೆ ಮಾಡಿ ಹೊಸ ಪಾದರಕ್ಷೆಗಳನ್ನು ತಯಾರಿಸಿ ದೇಶದಾದ್ಯಂತ ಪಾದರಕ್ಷೆಗಳಿಲ್ಲದ ಹಾಗೂ ಅಶಕ್ತರಿಗೆ ಉಚಿತವಾಗಿ ವಿತರಿಸುತ್ತದೆ.
ಪರಿಸರ ಸ್ನೇಹಿ ಈ ಕಾರ್ಯವನ್ನು ಗ್ರೀನ್ಸೋಲ್ ಸಂಸ್ಥೆ 2016ರಿಂದ ನಡೆಸಿಕೊಂಡು ಬರುತ್ತಿದೆ. ಗ್ರೀನ್ಸೋಲ್ ಫೌಂಡೇಶನ್ನ ಸಂಸ್ಥಾಪಕರಾದ ರಮೇಶ್ ಧಾಮಿ ಮತ್ತು ಶ್ರಿಯಾನ್ಸ್ ಭಂಡಾರಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಕೋಶಾಧಿಕಾರಿ ಭರತ್ ಶೆಟ್ಟಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ-ಸಂಸ್ಥಾಪಕ ಅಶ್ವತ್ ಎಸ್.ಎಲ್., ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪಪ್ರಾಂಶುಪಾಲ ಶರತ್ ಎಸ್. ಆಳ್ವ, ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.















