ರಷ್ಯಾದಲ್ಲಿ ಆಂತರಿಕ ಕಲಹ: ಪುತಿನ್ ಸರಕಾರಕ್ಕೆ ತಲೆನೋವಾದ ವ್ಯಾಗ್ನರ್‌ ಸಶಸ್ತ್ರ ಪಡೆಗಳು

ಮಾಸ್ಕೋ: ರಷ್ಯಾದ ವ್ಯಾಗ್ನರ್‌ನ ಸಶಸ್ತ್ರ ಪಡೆಗಳು ರೋಸ್ಟೋವ್-ಆನ್-ಡಾನ್ ನಗರದತ್ತ ಸಾಗುತ್ತಿರುವ ಮತ್ತು ಅದರ ಪ್ರಮುಖ ಮಿಲಿಟರಿ ತಾಣಗಳ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿರುವ ದೃಶ್ಯವು ರಷ್ಯಾದಲ್ಲಿ ರಾಜಕೀಯ ವಿಪ್ಲವದ ಮುನ್ಸೂಚನೆಯನ್ನು ನೀಡಿದೆ.

ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿ ಮಾಲೀಕ ಯೆವ್ಗೆನಿ ಪ್ರಿಗೊಜಿನ್ ಶುಕ್ರವಾರದಂದು ಕ್ರೆಮ್ಲಿನ್‌ಗೆ ನೇರವಾದ ಸವಾಲನ್ನು ಒಡ್ಡಿದ್ದು, ರಷ್ಯಾದ ರಕ್ಷಣಾ ಮಂತ್ರಿಯನ್ನು ಹೊರಹಾಕುವ ಗುರಿಯನ್ನು ಹೊಂದಿರುವ ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ.

ಉಕ್ರೇನ್ ಜೊತೆ ಯುದ್ದ ನಿರತವಾಗಿರುವ ರಷ್ಯಾವು ಇದೀಗ ಆಂತರಿಕ ದಂಗೆಯನ್ನು ಎದುರಿಸಬೇಕಾಗಿದೆ.

ರಷ್ಯಾದೊಳಗಿನ ಆಂತರಿಕ ಕಲಹದ ಉಲ್ಬಣದಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗೆ ನಿಕಟವರ್ತಿ ಎನ್ನಲಾದ ಯೆವ್ಗೆನಿ ವಿಕ್ಟೋರೊವಿಚ್ ಪ್ರಿಗೊಜಿನ್, ದೇಶದ ರಕ್ಷಣಾ ಸಚಿವಾಲಯವನ್ನು ಉರುಳಿಸುವಂತೆ ಮತ್ತು ತಮ್ಮ ದಾರಿ ಮಧ್ಯದಲ್ಲಿ ಬರುವ ಎಲ್ಲವನ್ನೂ ನಾಶ ಮಾಡುವ ಬೆದರಿಕೆ ಒಡ್ದಿದ್ದಾರೆ.

ಪಿಎಂಸಿ ವ್ಯಾಗ್ನರ್ ಎಂದೂ ಕರೆಯಲ್ಪಡುವ ವ್ಯಾಗ್ನರ್ ಗ್ರೂಪ್, ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಚಳುವಳಿಗೆ ಬೆಂಬಲವನ್ನು ನೀಡುತ್ತಿತ್ತು. ಈ ಗುಂಪನ್ನು ರಷ್ಯಾದ ಮಾಜಿ ಮಿಲಿಟರಿ ಅಧಿಕಾರಿ ಡಿಮಿಟ್ರಿ ಉಟ್ಕಿನ್ ಸ್ಥಾಪಿಸಿದ್ದರು. ಇದು ಆರಂಭದಲ್ಲಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುವ ರಹಸ್ಯ ಸಂಘಟನೆಯಾಗಿತ್ತು. 2014 ರಲ್ಲಿ 5,000 ಸೈನಿಕರಿದ್ದ ಸಂಖ್ಯೆಯು ಪ್ರಸ್ತುತ 50,000 ಕ್ಕೆ ಏರಿದೆ ಮತ್ತು ಕಳೆದ ವರ್ಷ ಉಕ್ರೇನ್ ಆಕ್ರಮಣದಲ್ಲಿ ಈ ಗುಂಪು ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಗುಂಪು ಯುದ್ದ ನಿರತ ಪ್ರದೇಶಗಳಲ್ಲಿ ಅತ್ಯಾಚಾರ, ದರೋಡೆ ಮುಂತಾದ ಅಪರಾಧಗಳನ್ನು ಮಾಡುತ್ತದೆ ಎನ್ನುವ ಆರೋಪವೂ ಇದರ ಮೇಲಿದೆ.

ಉಕ್ರೇನ್‌ನೊಂದಿಗಿನ ಯುದ್ಧದ ಸಮಯದಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅಸಮರ್ಥರಾಗಿದ್ದಾರೆ ಮತ್ತು ವ್ಯಾಗ್ನರ್ ಹೋರಾಟಗಾರರಿಗೆ ಸರಬರಾಜಿನಲ್ಲಿ ಕಡಿತ ಮಾಡಿದ್ದಾರೆ ಎಂದು ಆರೋಪ ಎದುರಾದ ನಂತರ ಗುಂಪಿನ ನಾಯಕ ಪ್ರಿಗೋಜಿನ್ ರಷ್ಯಾ ಸರಕಾರದ ವಿರುದ್ದ ತೊಡೆ ತಟ್ಟಿದ್ದಾರೆ. ಮಿಲಿಟರಿ ಕಂಪನಿಯು ಸಚಿವಾಲಯದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಬೇಕು ಎಂಬ ಆದೇಶವನ್ನು ತಳ್ಳಿಹಾಕಿರುವ ಪ್ರಿಗೋಜಿನ್ ಇದು ಗುಂಪಿನ ಮೇಲೆ ಹಿಡಿತ ಸಾಧಿಸುವ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಬಿಕ್ಕಟ್ಟಿನ ಮಧ್ಯೆ, ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಪತ್ರಿಕಾ ಕಚೇರಿ, ಹೇಳಿಕೆಯಲ್ಲಿ ಈ ಕೃತ್ಯವನ್ನು ಮತ್ತು ರಷ್ಯಾದ ಭೂಪ್ರದೇಶದಲ್ಲಿ ಸಶಸ್ತ್ರ ನಾಗರಿಕ ಸಂಘರ್ಷಕ್ಕೆ ಕರೆ ನೀಡಿದ ಅವರ ಹೇಳಿಕೆಗಳನ್ನು ಖಂಡಿಸಿದೆ.