ಏಷ್ಯಾ ಕಪ್ 2022: ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ

ನವದೆಹಲಿ: 2022ರ ಏಷ್ಯಾಕಪ್‌ಗೆ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಲಕ್ಷ್ಮಣ್ 2022 ರ ಏಷ್ಯಾ ಕಪ್‌ಗಾಗಿ ದುಬೈನಲ್ಲಿ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ಸೇರಿಕೊಂಡಿದ್ದಾರೆ.

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೋವಿಡ್-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ತಂಡದೊಂದಿಗೆ ಪ್ರಯಾಣಿಸಿಲ್ಲ ಎಂದು ಬಿಸಿಸಿಐ ದೃಢೀಕರಣದ ಒಂದು ದಿನದ ಬಳಿಕ ವಿವಿಎಸ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಿರುವ ಮಾಹಿತಿ ಬಂದಿದೆ.

2022ರ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಭಾನುವಾರ ಪಾಕಿಸ್ತಾನವನ್ನು ಎದುರಿಸಲಿದೆ.

ಭಾರತವು 2022 ರ ಏಷ್ಯಾಕಪ್‌ಗೆ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಲಿದೆ. 2018 ರಲ್ಲಿ ರೋಹಿತ್ ನಾಯಕತ್ವದಲ್ಲಿ, ಮೆನ್ ಇನ್ ಬ್ಲೂ ತಂಡವು ಪಂದ್ಯಾವಳಿಯನ್ನು ಗೆದ್ದಿತ್ತು. 2016 ರಲ್ಲಿ ಧೋನಿ ನೇತೃತ್ವದಲ್ಲಿ ಏಷ್ಯಾ ಕಪ್ ಅನ್ನು ಗೆದ್ದಿತ್ತು. ಈ ಬಾರಿ ಇತಿಹಾಸ ಪುನರಾವರ್ತಿಸಲಿದೆಯೆ ಎನ್ನುವುದನ್ನು ಕಾದು ನೋಡಬೇಕು.