ವೃಂದ ಮತ್ತು ನೇಮಕಾತಿ ನಿಯಮ ತುರ್ತು ತಿದ್ದುಪಡಿ: ಪದವೀಧರ ಶಿಕ್ಷಕರಿಗೆ ಹಿಂದಿನಂತೆ  ಪಾಠದ ಅವಕಾಶ ಕಲ್ಪಿಸಲು ಸಚಿವರ ಜತೆ ಚರ್ಚೆ

ಉಡುಪಿ: ವೃಂದ ಮತ್ತು ನೇಮಕಾತಿ ನಿಯಮ (ಸಿಆ್ಯಂಡ್‌ಆರ್‌)ಕ್ಕೆ ತುರ್ತು ತಿದ್ದುಪಡಿ ತಂದು ಪದವೀಧರ ಶಿಕ್ಷಕರಿಗೆ ಹಿಂದಿನಂತೆ 1ರಿಂದ 8ನೇ ತರಗತಿಯವರೆಗೆ ಪಾಠ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ
ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪದವೀಧರ ಶಿಕ್ಷಕರ ಸಮಾವೇಶ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಮ್ಮ ವ್ಯವಸ್ಥೆಯಲ್ಲಿ ಶಿಕ್ಷಣ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಶಿಕ್ಷಕರು ಮತ್ತೊಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಶಿಕ್ಷಕರ ಸಮಸ್ಯೆ ಸರಿಪಡಿಸದಿದ್ದರೆ, ಶಿಕ್ಷಣದ ಸಮಸ್ಯೆ ಬಗೆಹರಿಯುದಿಲ್ಲ. ಆದ್ದರಿಂದ ಶಿಕ್ಷಕರ
ವರ್ಗಾವಣೆ ಹಾಗೂ ನೇಮಕಾತಿ ವಿಚಾರಗಳು ಸರ್ಕಾರಕ್ಕೆ ಸವಾಲಾಗಿದೆ ಎಂದರು.
ಶಾಸಕ ರಘುಪತಿ ಭಟ್‌ ಮಾತನಾಡಿ, ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಿಂದ 6ರಿಂದ 8ನೇ ತರಗತಿಗೆ ಹೊಸದಾಗಿ ನೇಮಕಾತಿ ಮಾಡುವ ಬದಲು ಅನುಭವವುಳ್ಳ ಪದವೀಧರ ಶಿಕ್ಷಕರನ್ನೇ ಮುಂದುವರಿಸಬೇಕು. 1ರಿಂದ 5ನೇ ತರಗತಿಯಲ್ಲಿ ಖಾಲಿ ಇರುವ ಹುದ್ದೆಗೆ ಹೊಸದಾಗಿ ನೇಮಕಾತಿ ಮಾಡುವುದು ಸೂಕ್ತ. ಅಲ್ಲದೆ ಅಲ್ಲಿಗೂ ಪದವೀಧರರನ್ನೇ ಆಯ್ಕೆ ಮಾಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ. ದಿನಕರ ಶೆಟ್ಟಿ ಅಂಪಾರು, ಕೋಶಾಧಿಕಾರಿ ಎಸ್‌.ಸಿ. ಶಾನವಾಡ, ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ರಾಜ್ಯ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ಶಶಿಕುಮಾರ್‌, ಕುಂದಾಪುರ ಅಧ್ಯಕ್ಷ ಸದಾರಾಮ ಶೆಟ್ಟಿ, ಬೈಂದೂರು ವಿಶ್ವನಾಥ ಪೂಜಾರಿ, ಬ್ರಹ್ಮಾವರ ಅಧ್ಯಕ್ಷ ದಿನಕರ ಶೆಟ್ಟಿ, ಉಡುಪಿ ಅಧ್ಯಕ್ಷೆ ಮಂಗಳಾ ಶೆಟ್ಟಿ, ಕಾರ್ಕಳ ಕೃಷ್ಣ ಮೊಯಿಲಿ, ಜಿಲ್ಲಾಧ್ಯಕ್ಷ ರವಿ ಎಸ್. ಪೂಜಾರಿ, ಕಾರ್ಯದರ್ಶಿ ಚಂದ್ರಶೇಖರ ಮೊಗೇರ, ಜಿಲ್ಲಾ ಕೋಶಾಧಿಕಾರಿ ರಾಮಚಂದ್ರ ವಾಕುಡ ಮೊದಲಾದವರು ಉಪಸ್ಥಿತರಿದ್ದರು.
ನಂಬರ್‌ ಒನ್‌ ಸ್ಥಾನ ನಮಗೆ ಬೇಕಾಗಿಲ್ಲ:
ಶೈಕ್ಷಣಿಕ ಮಟ್ಟ ವೃದ್ಧಿಸುವುದೇ ಉಡುಪಿ ಜಿಲ್ಲೆಯ ಗುರಿ. ನಮಗೆ ನಂಬರ್‌ ಒನ್‌ ಪಟ್ಟ ಬೇಕಾಗಿಲ್ಲ. ಫಲಿತಾಂಶದಲ್ಲಿ ಯಾವುದೇ ಜಿಲ್ಲೆಯನ್ನು ನಂಬರ್‌ ಒನ್‌ ಸ್ಥಾನಕ್ಕೆ ಏರಿಸಬಹುದು. ಆದರೆ ಶೈಕ್ಷಣಿಕ ಮಟ್ಟದಲ್ಲಿ ಅದು ಅಸಾಧ್ಯ. ಕೇವಲ ಅನುದಾನ ನೀಡುವುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ. ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.