ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದೆ. ಅರ್ಧ ಗಂಟೆಯ ಅವಧಿಯೊಳಗೆ 30ಕ್ಕೂ ಹೆಚ್ಚು ಶಾಸಕರು ಮತ ಚಲಾಯಿಸಿದ್ದಾರೆ.
ವಿಧಾನಸೌಧದ ಮೊದಲ ಮಹಡಿಯಲ್ಲಿ ಮತಗಟ್ಟೆ ತೆರೆಯಲಾಗಿದೆ. ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಎಲ್ಲರಿಗಿಂತ ಮೊದಲು ಮತಚಲಾಯಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಕಣದಲ್ಲಿದ್ದಾರೆ. ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಬಿಜೆಪಿಯ ನಾರಾಯಣ ಸಾ ಭಾಂಡಗೆ ಮತ್ತು ಜೆಡಿಎಸ್ ನ ಡಿ. ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
223 ಶಾಸಕರು ನಾಲ್ವರು ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಸಂಜೆ 4ರವರೆಗೆ ಮತದಾನ ನಡೆಯಲಿದೆ. ಸಂಜೆ 5ಕ್ಕೆ ಮತಗಳ ಎಣಿಕೆ ಆರಂಭವಾಗಲಿದೆ.