ಮ್ಯಾಂಗ್ರೋವ್‌ ಕಾಡುಗಳ ಮಧ್ಯೆಯೂ ಮತದಾನ ಜಾಗೃತಿ: ಜಿಲ್ಲಾ ಸ್ವೀಪ್ ವತಿಯಿಂದ ವಿನೂತನ ಕಾರ್ಯ

ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್‌ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್‌ ಮೂಲಕ ತೆರಳಿ ಮ್ಯಾಂಗ್ರೋವ್‌ ಕಾಡುಗಳ ಮಧ್ಯೆ ಕಯಾಕ್‌ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ.

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಬುಧವಾರ, ಸಾಲಿಗ್ರಾಮದ ಕಯಾಕಿಂಗ್‌ ಪಾಯಿಂಟ್‌ ಬಳಿ , ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು , ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು , ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕಯಾಕಿಂಗ್‌ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್‌ ಆರಂಭಿಸಿದರು.

ಸುಮಾರು 30 ನಿಮಿಷಗಳ ಕಯಾಕಿಂಗ್‌ ನಂತರ ಮ್ಯಾಂಗ್ರೋವ್‌ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್‌ ಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ, ಕಯಾಕಿಂಗ್‌ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ, ಮತದಾನ ದಿನಾಂಕವನ್ನು ಒಳಗೊಂಡ ಬಲೂನ್‌ ಗಳನ್ನು ಹಾರಿಬಿಡುವ ಮೂಲಕ ಕೂಡಾ ಜಾಗೃತಿ ಮೂಡಿಸಲಾಯಿತು.