ಮತ ಎಣಿಕೆಗೆ ಸಂಪೂರ್ಣ ಸಜ್ಜು- ಉಡುಪಿ ಜಿಲ್ಲಾಧಿಕಾರಿ

ಉಡುಪಿ, : ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

     ಅವರು ಬುಧವಾರ, ಮತ ಎಣಿಕೆ ಕೇಂದ್ರದಲ್ಲಿನ ಸಿದ್ದತೆಗಳ ಕುರಿತು ಪರಿಶೀಲಿಸಿ ಮಾತನಾಡಿದರು.

     ಚುನಾವಣಾ ಆಯೋಗದ ನಿರ್ದೇಶನದನ್ವಯ, ನಿಗಧಿತ ಸಮಯಕ್ಕೆ ಸರಿಯಾಗಿ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು, ಇವಿಎಂಗಳ ಎಣಿಕೆ ನಂತರ ವಿವಿ ಪ್ಯಾಟ್‍ನ ಸ್ಲಿಪ್‍ಗಳ ಎಣಿಕೆ ಮಾಡಲಾಗುವುದು, ಮತ ಎಣಿಕೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪಕ್ಷಗಳ ಎಜೆಂಟರು ಸೇರಿದಂತೆ ಎಲ್ಲರಿಗೂ, ಮತದಾನ ಕೇಂದ್ರದದಲ್ಲಿಯೇ, ಊಟ, ಉಪಹಾರ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

    ಮತದಾನ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ವೀಕ್ಷಕರ ಕಚೇರಿ, ಅಂಚೆ ಮತ ಪತ್ರ ಎಣಿಕೆ ಮತ್ತು ವಿವಿ ಪ್ಯಾಟ್ ಎಣಿಕೆಗೆ ಕೈಗೊಂಡಿರುವ ಎಲ್ಲಾ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಮತ ಎಣಿಕೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿವಿ ಪ್ಯಾಟ್ ಸ್ಲಿಪ್‍ಗಳ ಎಣಿಕೆ ನಂತರ ಅಂತಿಮ ಫಲಿತಾಂಶ ಘೋಷಿಸಲಾಗುವುದು ಎಂದು ಡಿಸಿ ಹೇಳಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.