ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ

ಉಡುಪಿ: ಶ್ರೇಷ್ಠವಾದ ರಕ್ತದಾನದಿಂದ ಆಪತ್ತಿನಲ್ಲಿರುವವರ ಜೀವ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ. ಹೆಚ್ ಹೇಳಿದರು.

ಅವರು ಇಂದು ಚಿಟ್ಪಾಡಿಯ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ.), ಅಪ್ಪು ಅಭಿಮಾನಿಗಳ ಬಳಗ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಚಿಟ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.

ಆರೋಗ್ಯವಂತ ಮನುಷ್ಯನು ರಕ್ತದಾನ ಮಾಡಲು ಅರ್ಹನಾಗಿದ್ದು, ಎರಡು ಮೂರು ತಿಂಗಳಿಗೊಮ್ಮೆ ಒಂದು ಯೂನಿಟ್ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ಚೈತನ್ಯಶೀಲರಾಗಿ ಇರಲು ಸಾಧ್ಯವಾಗುತ್ತದೆ. ಹಿಂದಿನ ದಿನಗಳಲ್ಲಿ ಜನರು ರಕ್ತದಾನ ಮಾಡಲು ಯೋಚಿಸುತ್ತಿದ್ದರು. ರಕ್ತದಾನದ ಮಹತ್ವ ಹಾಗೂ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲವೆಂಬ ಅರಿವನ್ನು ಹೊಂದಿದ್ದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ಮಾತನಾಡಿ, ಸರ್ಕಾರಿ ನೌಕರರ ಸಂಘವು ಕಳೆದ15 ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ರಕ್ತದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದೆ ಎಂದರು.

ಲಯನ್ಸ್ ಕ್ಲಬ್‌ನ ಅಧ್ಯಕ್ಷ ರವಿರಾಜ್ ಮಾತನಾಡಿ, ರಕ್ತದಾನದ ಜೊತೆಗೆ ನೇತ್ರದಾನ ಮಾಡುವುದು ಒಂದು ಪ್ರಮುಖ ಕಾರ್ಯವಾಗಿದೆ. ಮೂಢನಂಬಿಕೆಗಳಿಂದಾಗಿ ಇಂತಹ ದಾನಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಯಂ ಪ್ರೇರಿತರಾಗಿ ದಾನ ಮಾಡಲು ಮುಂದೆ ಬರುತ್ತಿದ್ದಾರೆ ಎಂದರು.

ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಸಂಚಾಲಕ ಫಾ. ಚಾರ್ಲ್ಸ್ ಮಿನೆಜಸ್ ಮಾತನಾಡಿ, ಅನಾರೋಗ್ಯ ಹೊಂದಿ ರಕ್ತದ ಅವಶ್ಯಕತೆ ಇರುವಂತಹ ಕಷ್ಟದ ಸಂದರ್ಭದಲ್ಲಿ ರಕ್ತದಾನದ ಮಹತ್ವ ಅರ್ಥವಾಗುತ್ತದೆ. ಶ್ರೇಷ್ಠವಾದ ದಾನವನ್ನು ಮಾಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಗುರುಚರಣ ಕಾರ್ವಿ, ಪುರುಷೋತ್ತಮ, ಹರಿಶ್ಚಂದ್ರ ಪೂಜಾರಿ ಹಾಗೂ
ಶ್ಮಿತಾ ಶರತ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರೇಮಾನಂದ ಮತ್ತು ಇತರರು ಉಪಸ್ಥಿತರಿದ್ದರು.

ಪ್ರಭಾರ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಲಂದೂರ್ ಮಂಜುನಾಥ್ ನಿರೂಪಿಸಿದರು, ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜೆ. ವಿಜಯ ಡಿಸೋಜಾ ವಂದಿಸಿದರು.

ರಕ್ತದಾನ ಶಿಬಿರದಲ್ಲಿ 72 ಯೂನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು.