‘ವಾಯ್ಸ್ ಆಫ್ ಚಾಣಕ್ಯ–2026’ ರಾಜ್ಯಮಟ್ಟದ ಕರೋಕೆ ಸಂಗೀತ ಸ್ಪರ್ಧೆ; ಕುಂದಾಪುರದಲ್ಲಿ ನ.1ರಂದು ಆಡಿಷನ್

ಕುಂದಾಪುರ: ಚಾಣಕ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ಸ್, ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿರುವ ರಾಜ್ಯಮಟ್ಟದ ಕರೋಕೆ ಸಂಗೀತ ಸ್ಪರ್ಧೆ ‘ವಾಯ್ಸ್ ಆಫ್ ಚಾಣಕ್ಯ–2026’ರ 9ನೇ ಆವೃತ್ತಿಯ ಆಯ್ಕೆ ಪ್ರಕ್ರಿಯೆ ನ.1ರಂದು ಕುಂದಾಪುರದ ಬಂಡಾರ್ಕರ್ಸ್ ಕಾಲೇಜು ರಸ್ತೆಯ ಶಾಸ್ತ್ರಿ ಸರ್ಕಲ್‌ನ ಪೂರ್ವಿಕಾ ಕಾಂಪ್ಲೆಕ್ಸ್‌ನಲ್ಲಿರುವ ಎಸ್.ಪಿ. ಮ್ಯೂಸಿಕಲ್ಸ್ ಸಂಗೀತ ತರಬೇತಿ ಕೇಂದ್ರದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.

ಎಸ್.ಪಿ. ಮ್ಯೂಸಿಕಲ್ಸ್ ಕುಂದಾಪುರ ಇವರ ಸಹಯೋಗದೊಂದಿಗೆ ಆಯೋಜಿಸಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ವಯೋಮಾನದ ಗಾಯಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸುವವರಿಗೆ ₹10,000 ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವವರಿಗೆ ₹6,000 ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಗಳಿಸುವವರಿಗೆ ₹3,000 ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಟ್ರೋಫಿ ನೀಡಲಾಗುವುದು.

ಅಲ್ಲದೆ, ಮೂವರು ಗಾಯಕರಿಗೆ ತಲಾ ₹1,000 ನಗದು ಬಹುಮಾನ, ಮೆಚ್ಚುಗೆ ಪ್ರಮಾಣಪತ್ರ ಹಾಗೂ ಆಕರ್ಷಕ ಉಡುಗೊರೆ ಹ್ಯಾಂಪರ್‌ಗಳನ್ನು ನೀಡಲಾಗುವುದು.ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ಇರುವುದಿಲ್ಲ. ನೋಂದಣಿ ಶುಲ್ಕ ₹250 ಆಗಿದ್ದು, ಗೂಗಲ್ ಪೇ ಮೂಲಕ 9900408545 ಸಂಖ್ಯೆಗೆ ಅಥವಾ ಆಡಿಷನ್ ನಡೆಯುವ ಸ್ಥಳದಲ್ಲಿ ಪಾವತಿಸಬಹುದು. ಸ್ಪರ್ಧಿಗಳು ಕರೋಕೆ ಬಳಸಿ ಹಾಡಬೇಕು.

ಈ ಹಿಂದೆ ನಡೆದ ವಾಯ್ಸ್ ಆಫ್ ಚಾಣಕ್ಯ’ ಸೀಸನ್ 1ರಿಂದ 8ರವರೆಗಿನ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಈ ಆಡಿಷನ್‌ನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ವೃತ್ತಿಪರ ಹಿನ್ನೆಲೆ ಗಾಯಕರು, ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವವರು, ಲೈವ್ ಆರ್ಕೆಸ್ಟ್ರಾ ಗಾಯಕರು ಹಾಗೂ ಸಂಗೀತ ಶಿಕ್ಷಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.

ಆಡಿಷನ್‌ನಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಈ ಬಾರಿ ಸೆಮಿಫೈನಲ್ ಮತ್ತು ಫೈನಲ್ ಸುತ್ತುಗಳನ್ನು ಒಂದೇ ದಿನ ನಡೆಸಲು ಉದ್ದೇಶಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಉದಯ್ ಕುಮಾರ್ ಶೆಟ್ಟಿ ಅವರನ್ನು 9900408545 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.