ಹೆಬ್ರಿ: ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಕಳೆದ 11 ವರ್ಷಗಳಿಂದ ವಿವಿಧ ಕಲಾಪ್ರಕಾರಗಳನ್ನು ತರಬೇತಿ ನೀಡುತ್ತಿರುವ ಚಾಣಕ್ಯ ಸಂಸ್ಥೆ ಹೆಬ್ರಿಯಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯನ್ನು ಅಯೋಜಿಸುವುದರ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಅವಿಭಜಿತ ದ.ಕ.ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಹೇಳಿದರು.

ಅವರು ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಸಂಗೀತ ಸಮರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಪ್ರಾಂಶುಪಾಲ ಡಾ.ವಿದ್ಯಾಧರ್ ಹೆಗ್ಡೆ ವಹಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿದಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ನೆನಪಿನಲ್ಲಿ ಚಾಣಕ್ಯ ಸಂಸ್ಥೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.

ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡಮಿ ಹೆಬ್ರಿ ಇದರ 11ನೇ ವರ್ಷದ ವಾರ್ಷಿಕೋತ್ಸವ ಚಾಣಕ್ಯ ಸಂಭ್ರಮದ ಅಂಗವಾಗಿ ಕೊಡಮಾಡುವ ಚಾಣಕ್ಯ ಕಲಾಪೋಷಕ ಪ್ರಶಸ್ತಿಯನ್ನು ಉದ್ಯಮಿ ವಾದಿರಾಜ ಶೆಟ್ಟಿ ಅವರಿಗೆ ಹಾಗೂ ಚಾಣಕ್ಯ ಕಲಾರತ್ನ ಪ್ರಶಸ್ತಿಯನ್ನು ಸಂಗೀತ ಗುರು ಹಾಲಾಡಿ ಕೃಷ್ಣ ಕಾಮತ್ ಅವರಿಗೆ ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ಹೆಬ್ರಿ ಎಸ್.ಅರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ್ ಶೆಟ್ಟಿ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ, ಹಿರಿಯಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ನವೀನ್ ಪೆರ್ಡೂರು,ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಮೃತ ಭಾರತಿಯ ಪಿ ಆರ್ ಓ ವಿಜಯ್ ಕುಮಾರ್ ಶೆಟ್ಟಿ ಸನ್ಮಾನಿತರ ಪತ್ರ ವಾಚಿಸಿದರು.
ಗಾಯಕ ವಿನೀಶ್ ಭಾರದ್ವಾಜ್, ಸಂಗೀತ ನಿರ್ದೇಶಕ ರಮೇಶ್ ಡಿ.ಚಾಂತಾರು, ಸಂಗೀತ ಶಿಕ್ಷಕಿ ಸ್ಮಿತಾ ಭಟ್, ಶೃತಿ ಭಟ್ ತೀರ್ಪುಗಾರರಾಗಿ ಭಗವಹಿಸಿದ್ದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ಹಾಗೂನಿರೂಪಕಿ ದೀಪಿಕಾ ಶೆಟ್ಟಿ ನಿರೂಪಿಸಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ವಂದಿಸಿದರು. ಬಳಿಕ ಚಾಣಕ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ, ಗಾನ ವೈಭವ, ಭರತನಾಟ್ಯ, ಯಕ್ಷಗಾನ,ಕರಾಟೆ ಪ್ರದರ್ಶನಗೊಂಡಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ 12 ಜನ ಫೈನಲ್ ನಲ್ಲಿ ಭಾಗವಹಿಸಿದ್ದರು.
















